ಮಡಿಕೇರಿ: ಕಾರೊಂದಕ್ಕೆ ಅಪಘಾತಪಡಿಸಿ, ತಪಾಸಣೆ ಬಂದ ಪೊಲೀಸರ ಮೇಲೆಯೇ ಕಾರು ಹತ್ತಿಸಲು ಮುಂದಾದ ಕಾರು ಚಾಲಕ ಪೊಲೀಸರ ಅತಿಥಿಯಾದ ಘಟನೆ ಮಡಿಕೇರಿಯಲ್ಲಿ ನಡೆದಿದೆ. ಬಂಟ್ವಾಳ ಮೂಲದ ನಜೀರ್ ಅಪಘಾತಪಡಿಸಿ ಪರಾರಿಯಾದ ಕಾರು ಚಾಲಕನಾಗಿದ್ದಾನೆ.
ಗುರುವಾರ ಸಂಜೆ ನಗರದ ತಿಮ್ಮಯ್ಯ ವೃತ್ತದಲ್ಲಿ ಎರಡು ಸ್ವಿಫ್ಟ್ ಕಾರುಗಳ ನಡುವೆ ಅಪಘಾತ ಸಂಭವಿಸಿತ್ತು. ಈ ವೇಳೆ ಸ್ಥಳದಲ್ಲಿ ಕರ್ತವ್ಯದಲ್ಲಿದ್ದ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಸಂಜು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದು, ಇತರೆ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದರು. ಬಳಿಕ ಅಪಘಾತ ಪಡಿಸಿದ ಕಾರು ಚಾಲಕ ನಜೀರ್‌ನಿಗೆ ಕಾರನ್ನು ಪಕ್ಕಕ್ಕೆ ತಂದು ನಿಲ್ಲಿಸುವಂತೆ ಸೂಚಿಸಿ ಹಿಂದಕ್ಕೆ ತೆಗೆದುಕೊಳ್ಳಲು ತಿಳಿಸಿದ್ದಾರೆ.
ಆದರೆ ಚಾಲಕ ನಜೀರ್ ಈ ವೇಳೆ ಪೊಲೀಸ್ ಸಿಬ್ಬಂದಿ ಮೇಲೆ ದರ್ಪ ತೋರಿದ್ದು ಅಪಘಾತ ವಿಚಾರವಾಗಿ ಜಗಳವಾಡಿದ್ದಾನೆ. ಬಳಿಕ ಕಾರನ್ನು ಹಿಂದಕ್ಕೆ ತೆಗೆದುಕೊಂಡು ಎದುರಿಗಿದ್ದ ಪೊಲೀಸ್ ಸಿಬ್ಬಂದಿ ಮೇಲೇ ಹತ್ತಿಸಿಕೊಂಡು ಹೋಗಲು ಮುಂದಾಗಿದ್ದಾನೆ.
ಈ ವೇಳೆ ಅದೃಷ್ಟವಶಾತ್ ಪೊಲೀಸ್ ಸಿಬ್ಬಂದಿ ಪಕ್ಕಕ್ಕೆ ಸರಿದುಕೊಂಡಿದ್ದು, ಕಾರಿನೊಂದಿಗೆ ನಜೀರ್ ಪರಾರಿಯಾಗಿದ್ದ. ಚಾಲಕನ ಈ ಕೃತ್ಯ ಸಮೀಪದ ಸಿಸಿಕ್ಯಾಮೆರಾ ಒಂದರಲ್ಲಿ ಸೆರೆಯಾಗಿದ್ದು ಮಡಿಕೇರಿ ಸಂಚಾರಿ ಠಾಣಾ ಪೊಲೀಸರು ಆರೋಪಿ ನಜೀರ್‌ನನ್ನ ಬಂಧಿಸಿದ್ದಾರೆ.