ಅಂಕೋಲಾ: “ನನ್ನ ಸ್ಥಿತಿ ಯಾರಿಗೂ ಆಗಬಾರದು, ಕ್ಷಮಿಸಿ ಅಮ್ಮಾ, ನನ್ನಿಂದ ಯಾರಿಗೂ ಸಮಸ್ಯೆ ಆಗೋದು ಬೇಡ” ಎಂದು ಯುವಕನೋರ್ವ ಪತ್ರ ಬರೆದಿಟ್ಟು ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಬೆಳಸೆಯಲ್ಲಿ ನಡೆದಿದೆ.
ತಾನು 8 ವರ್ಷಗಳಿಂದ ಪ್ರೀತಿಸುತ್ತಿದ್ದ ಯುವತಿ ಇದೀಗ ಏಕಾಏಕಿ ಮದುವೆಗೆ ಒಪ್ಪದೇ ಬಿಟ್ಟುಹೋಗಿದ್ದು, ಅವಳನ್ನು ಬಿಟ್ಟು ಇರುವುದು ಸಾಧ್ಯವಾಗದೇ ಆತ್ಮಹತ್ಯೆ ನಿರ್ಧಾರ ಕೈಗೊಂಡಿದ್ದಾಗಿ ಬರೆದಿಟ್ಟು ವಾಸರಕುದ್ರಿಗೆ ಮೇಲಿನಗುಳಿಯ ಯುವಕ ಸಂತೋಷ ರೂಪ ಗೌಡ(31) ಮಾವಿನಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
“ನಾನು ಲವ್ ಮಾಡಿ 8 ವರ್ಷ ಆಯಿತು. ಈಗ ನಾನು ಮೇ ತಿಂಗಳಿನಲ್ಲಿ ಮದುವೆ ಆಗಬೇಕಾಗಿತ್ತು. ಈಗ ನಂಗೆ ಈತರ ಮಾಡಿದ್ರು, ನನ್ನ ಫ್ರೆಂಡ್ಸ್ ಹಾಗೂ ಎಲ್ಲಾ ಊರಿಗೂ ಗೊತ್ತು, ಆದರೆ ಇವಾಗ ನಂಗೆ ಇತರ ಮಾಡಿ 20 ದಿನ ಆಯ್ತು. ನನ್ನ ಪರಿಸ್ಥಿತಿ ಯಾರಿಗೂ ಬೇಡ. ಅಮ್ಮ ಸಾರಿ ಅಮ್ಮ, ನನ್ನ ಕೂಡೆ ಆಗುದಿಲ್ಲ. ನನ್ನ ಸಾವು ಎಲ್ಲಾ ಲವರ್ಸ್‌ಗೂ ಗುತ್ತಾಗಬೇಕು. ಎಲ್ಲರಿಗೂ ಕೈಮುಗಿದು ಬೇಡಿಕೊಳ್ತೇನೆ. ಯಾರಿಗೂ ನಂಗೆ ಮಾಡಿದತರ ಯಾರಿಗೂ ಮಾಡಬೇಡಿ” ಎಂದು ತಾನು ಅನುಭವಿಸುತ್ತಿರುವ ಕಷ್ಟವನ್ನು ಪತ್ರದಲ್ಲಿ ಹೇಳಿಕೊಂಡಿರುವ ಯುವಕ, ಅಮ್ಮನಿಗೆ ಕ್ಷಮೆಯಾಚಿಸಿ ಆತ್ಮಹತ್ಯೆ ದಾರಿ ತುಳಿದಿದ್ದಾನೆ.