ಮಂಗಳೂರು: ಹುಲ್ಲು ಕತ್ತರಿಸಲು ಗದ್ದೆಗೆ ತೆರಳಿದ್ದ ವೇಳೆ ರೈತನ ಮೇಲೆ ಚಿರತೆಯೊಂದು ದಾಳಿ ನಡೆಸಿದೆ. ಮುಲ್ಕಿ ತಾಲ್ಲೂಕಿನ ಕಿನ್ನಿಗೋಳಿಯ ಯಳತ್ತೂರು ದೇವಸ್ಥಾನದ ಬಳಿ ಘಟನೆ ನಡೆದಿದ್ದು, ಲಿಗೋರಿ(65) ಗಾಯಗೊಂಡ ಕೃಷಿಕನಾಗಿದ್ದಾನೆ.
ರೈತ ಲಿಗೋರಿ ಎಂದಿನಂತೆ ಹುಲ್ಲು ತರಲೆಂದು ಗದ್ದೆಗೆ ತೆರಳಿದ್ದ. ಗದ್ದೆಯಲ್ಲಿ ಹುಲ್ಲು ಕತ್ತರಿಸುತ್ತಾ ಕುಳಿತಿದ್ದ ವೇಳೆ ಗದ್ದೆಯ ಭಾಗದಲ್ಲಿ ಅವಿತು ಕುಳಿತಿದ್ದ ಚಿರತೆ ಏಕಾಏಕಿ ರೈತನ ಮೇಲೆ ದಾಳಿ ನಡೆಸಿದೆ. ಪರಿಣಾಮ ರೈತನ ಮುಖ ಹಾಗೂ ಕೈಗೆ ಗಾಯಗಳಾಗಿದ್ದು, ಈ ವೇಳೆ ಚಿರತೆಯಿಂದ ತಪ್ಪಿಸಿಕೊಳ್ಳಲು ರೈತ ಕೈಗೆ ಸಿಕ್ಕ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾನೆ.
ರೈತ ದಾಳಿ ನಡೆಸಿದ ಬೆನ್ನಲ್ಲೇ ಚಿರತೆ ಗಾಬರಿಗೊಂಡು ಸ್ಥಳದಿಂದ ಓಟಕ್ಕಿತ್ತಿದೆ. ಬಳಿಕ ಗಾಯಗೊಂಡಿದ್ದ ರೈತ ಸುಧಾರಿಸಿಕೊಂಡು ಕಟೀಲಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾನೆ. ಅದೃಷ್ಟವಶಾತ್ ರೈತ ಲಿಗೋರಿ ಅಪಾಯದಿಂದ ಪಾರಾಗಿದ್ದಾನೆ.