ಕುಮಟಾ: ಕೆಲಕ್ಕೆಂದು ಬಂದಿದ್ದ ಕಾರ್ಮಿಕನನ್ನು ಜೊತೆಗಿದ್ದವರೇ ಕಲ್ಲು ಎತ್ತಿಹಾಕಿ ಹತ್ಯೆ ಮಾಡಿರುವ ಘಟನೆ ಕುಮಟಾದಲ್ಲಿ ನಡೆದಿದೆ. ಹುಬ್ಬಳ್ಳಿ ಮೂಲದ ಇಮ್ತಿಯಾಜ್(25) ಕೊಲೆಯಾದ ದುರ್ದೈವಿ ಯುವಕನಾಗಿದ್ದಾನೆ. ಯುವಕನ ಹತ್ಯೆಗೈದ ಹುಬ್ಬಳ್ಳಿ ಮೂಲದ ಮೌನೇಶ ಹಾಗೂ ಸಾಧಿಕ್‌ನನ್ನು ಪೊಲೀಸರು ಹುಬ್ಬಳ್ಳಿಯಲ್ಲಿ ಬಂಧಿಸಿದ್ದಾರೆ.
ಹುಬ್ಬಳ್ಳಿ ಮೂಲದ ನಾಲ್ವರೂ ಕಾರ್ಮಿಕರು ಕುಮಟಾ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಗಾರೆ ಕೆಲಸಕ್ಕೆಂದು ಬಂದು ಒಂದು ತಿಂಗಳಿನಿಂದ ಆಸ್ಪತ್ರೆಯ ಕ್ವಾಟ್ರಸ್‌ನಲ್ಲೇ ಉಳಿದುಕೊಂಡಿದ್ದರು. ನಿನ್ನೆ ರಾತ್ರಿ ಊಟ ಮಾಡುವ ಮುನ್ನ ಮೃತ ಇಮ್ತಿಯಾಜ್ ಸೇರಿ ಮೂವರು ಎಣ್ಣೆ ಪಾರ್ಟಿ ಮಾಡಿದ್ದಾರೆ. ಇನ್ನೋರ್ವ ಮೋಯುದ್ದೀನ್ ಊಟ ಮಾಡಿ ಮಲಗಿದ್ದ ಎನ್ನಲಾಗಿದೆ. ಈ ವೇಳೆ ಕ್ಷುಲ್ಲಕ ಕಾರಣಕ್ಕೆ ಜಗಳ ಪ್ರಾರಂಭವಾಗಿದ್ದು, ಮಧ್ಯರಾತ್ರಿ ಸುಮಾರು 12 ಗಂಟೆ ವೇಳೆಗೆ ಮೂವರೂ ಜಗಳವಾಡುತ್ತಾ ಹೊರಗೆ ಹೋಗಿದ್ದಾರೆ.
ಮೂವರೂ ಮತ್ತೆ ಕುಡಿಯಲು ಹೊರಹೋಗಿರಬಹುದು ಎಂದು ಅಂದುಕೊಂಡ ಮೊಯುದ್ದೀನ್ ಸುಮ್ಮನೆ ಮಲಗಿದ್ದು, ಅಷ್ಟರಲ್ಲಾಗಲೇ ಹೊರಹೋದವರು ಇಮ್ತಿಯಾಜ್ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ ಮಾಡಿದ್ದಾರೆ. ಬೆಳಿಗ್ಗೆ ಮೋಯುದ್ದೀನ್ ಎದ್ದು ನೋಡಿದಾಗ ಇಮ್ತಿಯಾಜ್ ರೂಂನ ಎದುರೇ ಹೆಣವಾಗಿ ಬಿದ್ದಿದ್ದು, ಆರೋಪಿಗಳಾದ ಮೌನೇಶ್ ಹಾಗೂ ಸಾಧಿಕ್ ಹುಬ್ಬಳ್ಳಿಯತ್ತ ಪರಾರಿಯಾಗಿದ್ದರು.
ಬಳಿಕ ಮೋಯುದ್ದೀನ್ ನೀಡಿದ ಮಾಹಿತಿ ಆಧರಿಸಿ ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸಿದ್ದು, ಕೊನೆಗೂ ಹುಬ್ಬಳ್ಳಿಯಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿ ಕರೆತರುತ್ತಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲವಾಗಿದ್ದು ಆರೋಪಿಗಳ ವಿಚಾರಣೆ ಬಳಿಕ ಹತ್ಯೆಗೆ ಕಾರಣ ತಿಳಿದುಬರಬೇಕಿದೆ. ಈ ಸಂಬಂಧ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.