ಕಾರವಾರ: ಅಡಿಕೆ ಸುಲಿಯುವ ಯಂತ್ರಕ್ಕೆ ಸಿಲುಕಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪತ್ನಿ ಸಾವನ್ನಪ್ಪಿದ ಧಾರುಣ ಘಟನೆ ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ. ಶೋಭಾ ಹೆಗಡೆ ಹೊಸಬಾಳೆ ಮೃತ ದುರ್ದೈವಿಯಾಗಿದ್ದಾರೆ.
ಇವರು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಹೆಗಡೆ ಹೊಸಬಾಳೆ ಅವರ ಪತ್ನಿಯಾಗಿದ್ದಾರೆ.
ಹೊಸಬಾಳೆ ಅವರ ಮನೆಯಲ್ಲಿ ಅಡಿಕೆ ಸುಲಿಯುವ ಕಾರ್ಯ ಆರಂಭವಾಗಿದ್ದು, ಕೆಲಸಗಾರರು ಅಡಿಕೆ ಸುಲಿಯುವ ಕಾರ್ಯದಲ್ಲಿ ತೊಡಗಿದ್ದರು. ಅವರನ್ನು ನೋಡಿಕೊಂಡು ಬರಲು ಶೋಭಾ ಅವರು ತೆರಳಿದ್ದು, ಈ ವೇಳೆ ಆಕಸ್ಮಿಕವಾಗಿ ಅವರ ಸೀರೆಯ ಸೆರಗು ಅಡಿಕೆ ಚಾಲಿ ಸುಲಿಯುವ ಯಂತ್ರಕ್ಕೆ ಸಿಲುಕಿದೆ.
ಕೂಡಲೇ ಅವರು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರಾದರೂ ಅಷ್ಟರಲ್ಲಾಗಲೇ ಯಂತ್ರ ಅವರನ್ನು ಮೇಲೆತ್ತಿ ಬಿಸಾಡಿದ್ದು ಪರಿಣಾಮ ತೀವ್ರ ರಕ್ತಸ್ರಾವದಿಂದ ಅವರು ಸಾವನ್ನಪ್ಪಿದ್ದಾರೆ. ಕೆಲಸದವರು ಅಲ್ಲಿಯೇ ಇದ್ದರಾದರೂ ಅವರು ರಕ್ಷಣೆಗೆ ಧಾವಿಸುವಷ್ಟರಲ್ಲಾಗಲೇ ಶೋಭಾ ಹೊಸಬಾಳೆ ಅವರು ಕ್ಷಣಮಾತ್ರದಲ್ಲಿ ಯಂತ್ರಕ್ಕೆ ಸಿಲುಕಿ ಬಿದ್ದಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.