ಜೋಯಿಡಾ: ಆರೋಪಿಯನ್ನು ಕರೆತರುತ್ತಿದ್ದ ಕಾರಿಗೆ ಎದುರಿನಿಂದ ಬಂದ ಲಾರಿ ಡಿಕ್ಕಿ ಹೊಡೆದ ಘಟನೆ ಜೋಯಿಡಾ ತಾಲ್ಲೂಕಿನ ರಾಮನಗರ ಗೋವಾ ಗಡಿ ಅನಮೋಡ್‌ನಲ್ಲಿ ನಡೆದಿದೆ. ಹಳಿಯಾಳ ಠಾಣಾ ಹೆಡ್ ಕಾನ್ಸ್‌ಸ್ಟೇಬಲ್ ಎಂ.ಎಂ.ಮುಲ್ಲಾ ಗಂಭೀರ ಗಾಯಗೊಂಡಿದ್ದಾರೆ.
ಗೋವಾದಿಂದ ಆರೋಪಿಯೋರ್ವನ್ನು ಬಂಧಿಸಿದ್ದ ಹಳಿಯಾಳ ಪೊಲೀಸರು ಇನ್ನೋವಾ ಕಾರಿನಲ್ಲಿ ಕರೆತರುತ್ತಿದ್ದರು. ಗೋವಾ ಕರ್ನಾಟಕ ಗಡಿ ಅನಮೋಡ್ ದಾಟಿ ರಾಮನಗರ ತಲುಪುತ್ತಿದ್ದಂತೆ ರಾಂಗ್ ಸೈಡ್‌ನಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಗಾಯಗೊಂಡ ಹೆಡ್ ಕಾನ್ಸ್‌ಸ್ಟೇಬಲ್ ಎಂ.ಎಂ.ಮುಲ್ಲಾರನ್ನು ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಲಾರಿ ಡಿಕ್ಕಿಯಾದ ರಭಸಕ್ಕೆ ಹಳಿಯಾಳ ಕ್ರೈಂ ಪಿಎಸ್‌ಐ ಅಮೀನ್ ಅತ್ತಾರ್, ಆರೋಪಿ ಹಾಗೂ ಇತರೆ 4-5 ಪೊಲೀಸ್ ಸಿಬ್ಬಂದಿಗೂ ಗಾಯಗಳಾಗಿದ್ದು, ಹಳಿಯಾಳದಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸ್ ಕಾರಿಗೆ ರಾಂಗ್ ಸೈಡ್‌ನಿಂದ ಬಂದು ಡಿಕ್ಕಿ ಹೊಡೆದ ಲಾರಿಯನ್ನು ವಶಕ್ಕೆ ಪಡೆಯಲಾಗಿದ್ದು, ನಿರ್ಲಕ್ಷ್ಯದ ಚಾಲನೆ ದೂರಿನ ಮೇಲೆ ಚಾಲಕನನ್ನು ಬಂಧಿಸಲಾಗಿದೆ. ಈ ಸಂಬಂಧ ರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.