ಬೆಂಗಳೂರು: ಎಂ.ಎಸ್.ರಾಮಯ್ಯ ನಗರದ ಬಾಡಿಗೆ ಕೊಠಡಿಯಲ್ಲಿ ಮೂವರು ಬಾಲಕಿಯರಿಗೆ ಕಿರುಕುಳ ಮತ್ತು ಬ್ಲ್ಯಾಕ್ಮೇಲ್ ಮಾಡಿದ ಆರೋಪದ ಮೇಲೆ 40 ವರ್ಷದ ಗೃಹರಕ್ಷಕನನ್ನು ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಸುರೇಶ್ ಕುಮಾರ್ ಎಂದು ಗುರುತಿಸಲಾಗಿದೆ.
ಕೇರಳ ಮೂಲದ ಮೂವರು ಬಿಎಸ್ಸಿ ವಿದ್ಯಾರ್ಥಿಗಳು ಬಾಡಿಗೆ ಕೋಣೆಯಲ್ಲಿ ವಾಸಿಸುತ್ತಿದ್ದರು. ಶುಕ್ರವಾರ ರಾತ್ರಿ ಕುಮಾರ್ ಅವರ ಮನೆಯ ಬಾಗಿಲನ್ನು ತಟ್ಟಿದ್ದು ಪೊಲೀಸರ ಸೋಗಿನಲ್ಲಿ ಒಳಪ್ರವೇಶಿಸಿದ್ದಾನೆ. ವಿದ್ಯಾರ್ಥಿಗಳಿಂದ ತೊಂದರೆಯಾಗುತ್ತಿರುವುದಾಗಿ ದೂರು ಬಂದಿದೆ ಎಂದು ಬೆದರಿಸಿ ಅವರೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ.
ಬಳಿಕ ಅವರಿಗೆ ಬೆದರಿಕೆ ಹಾಕಿ, ತನಿಖೆಯ ನೆಪದಲ್ಲಿ 5,000 ರೂ. ಪಡೆದಿದ್ದು, ಜೊತೆಗೆ ಅವರ ಮೊಬೈಲ್ ನಂಬರ್ ಮತ್ತು ಇತರ ವಿವರಗಳನ್ನು ಸಹ ತೆಗೆದುಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ವೇಳೆ ವಿದ್ಯಾರ್ಥಿನಿಯ ಸ್ನೇಹಿತನೋರ್ವ ಈತನ ಮೇಲೆ ಸಂಶಯ ಬಂದು 112ಕ್ಕೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದ. ಪೊಲೀಸರು ಆಗಮಿಸಿ ಮಾಹಿತಿ ಪಡೆದು, ದುರ್ವರ್ತನೆ ಮತ್ತು ಸುಲಿಗೆ ಆರೋಪದ ಮೇಲೆ ಕುಮಾರ್ ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು. ಕೆಲವು ತಿಂಗಳ ಹಿಂದೆ ವಿಚಾರಣೆಯ ನೆಪದಲ್ಲಿ ಆತ ವಿದ್ಯಾರ್ಥಿಗಳಿಂದ ಹಣವನ್ನು ಸುಲಿಗೆ ಮಾಡಿದ್ದನೆಂದೂ ತನಿಖೆಯಿಂದ ತಿಳಿದುಬಂದಿದೆ.