ದಾವಣಗೆರೆ: ರಾಮ್ ಅಂಡ್ ಕೋ ಸರ್ಕಲ್ ಗೆಳೆಯರ ಬಳಗದಿಂದ ಮಾರ್ಚ್ 14 ರಂದು ಹೋಳಿ ಆಚರಿಸಲಿದ್ದು. ಈ ವರ್ಷ ರಾಮ್ ಅಂಡ್ ಕೋ ಸರ್ಕಲ್ ನಲ್ಲಿ ಹೋಳಿ ಆಚರಿಸುವುದಿಲ್ಲ ಎಂದು ಕೆಲವರು ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ. ಅಂತಹ ಸುದ್ದಿಗಳನ್ನು ಯಾರೂ ನಂಬಬಾರದು.ಪ್ರತಿ ವರ್ಷದಂತೆ ಈ ಬಾರಿಯೂ ರಾಮ್ ಅಂಡ್ ಕೋ ವೃತ್ತದಲ್ಲಿ ಹೋಳಿ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಗುವುದು ಎಂದು ಶ್ರೀ ವರಸಿದ್ಧಿ ವಿನಾಯಕ ಮಹೋತ್ಸವ ಸಮಿತಿ ಅಧ್ಯಕ್ಷ ಕೆ.ನಾಗೇಂದ್ರ ರೆಡ್ಡಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಕಳೆದ 27 ವರ್ಷಗಳಿಂದ ರಾಮ್ ಅಂಡ್ ಕೋ ವೃತ್ತದಲ್ಲಿ ಹೋಳಿ ಆಚರಿಸಲಾಗುತ್ತಿದೆ. ಈ ವರ್ಷವೂ ಹೋಳಿಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುವುದು. ಶಾಸಕ ಶಾಮನೂರು ಶಿವಶಂಕರಪ್ಪ ಹೋಳಿಯನ್ನು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
ಮಾರ್ಚ್ 13 ರಂದು ಸಂಜೆ 7 ಗಂಟೆಗೆ ಕಾಮದಹನ ನಡೆಯಲಿದೆ. ಮಾರ್ಚ್ 14 ರಂದು ಶುಕ್ರವಾರ ಬೆಳಿಗ್ಗೆ 7 ರಿಂದ ಮಧ್ಯಾಹ್ನ 1 ರವರೆಗೆ ಹೋಳಿ ಆಚರಿಸಲಾಗುವುದು. ಎರಡು ಸಾವಿರಕ್ಕೂ ಹೆಚ್ಚು ಯುವಕರು ಮತ್ತು ಯುವತಿಯರು ಭಾಗವಹಿಸಲಿದ್ದು, ಯುವತಿಯರಿಗೆ ಪ್ರತ್ಯೇಕ ಸ್ಥಳಾವಕಾಶ ಕಲ್ಪಿಸಲಾಗುವುದು ಎಂದರು.
ಬೆಳಗಾವಿಯಿಂದ ಡಿಜೆ ತರಿಸಲಾಗುವುದು. ಕಾಮದಹನದ ಸಮಯದಲ್ಲಿ ಕಾಮದಹನದ ಹಿಂದಿನ ಪೌರಾಣಿಕ ಕಥೆಯನ್ನು ಡಿವಿಡಿ ಮೂಲಕ ಪ್ರಸಾರ ಮಾಡಲು ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.