ಗೋಕರ್ಣ: ಪ್ರವಾಸಕ್ಕೆಂದು ಬಂದವರು ಸಮುದ್ರದಲ್ಲಿ ಈಜಲು ನೀರಿಗಿಳಿದ ವೇಳೆ ಅಲೆಗಳ ಹೊಡೆತಕ್ಕೆ ಸಿಲುಕಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರನ್ನು ಜೀವರಕ್ಷಕ ಸಿಬ್ಬಂದಿ ರಕ್ಷಣೆ ಮಾಡಿದ ಘಟನೆ ಕುಮಟಾ ತಾಲ್ಲೂಕಿನ ಗೋಕರ್ಣದ ಓಂ ಬೀಚ್‌ನಲ್ಲಿ ನಡೆದಿದೆ. ಚರಣ್(23) ಹಾಗೂ ಶ್ರೀಕಾಂತ್(26) ರಕ್ಷಣೆಗೊಳಗಾದ ಪ್ರವಾಸಿಗರಾಗಿದ್ದಾರೆ.
ದೀಪಾವಳಿ ಬೆನ್ನಲ್ಲೇ ಸಾಲು ಸಾಲು ರಜೆಗಳು ಇದ್ದ ಹಿನ್ನಲೆ ಗೋಕರ್ಣಕ್ಕೆ ಸಾವಿರಾರು ಪ್ರವಾಸಿಗರು ಆಗಮಿಸಿದ್ದಾರೆ. ಅದರಂತೆ ಆಂಧ್ರಪ್ರದೇಶ ಮೂಲದ ಕಡಪ ಜಿಲ್ಲೆಯ ನಾಲ್ವರು ಪ್ರವಾಸಿಗರು ಗೋಕರ್ಣಕ್ಕೆ ಪ್ರವಾಸಕ್ಕೆಂದು ಬಂದಿದ್ದರು. ಈ ವೇಳೆ ಓಂ ಬೀಚ್‌ನಲ್ಲಿ ಸಮುದ್ರದಲ್ಲಿ ಈಜಾಡಲು ತೆರಳಿದ್ದು, ಮೋಜು ಮಸ್ತಿ ಮಾಡುತ್ತಿದ್ದ ವೇಳೆ ಅಲೆಗಳ ಅಬ್ಬರಕ್ಕೆ ಸಿಲುಕಿ ನಾಲ್ವರ ಪೈಕಿ ಇಬ್ಬರು ಮುಳುಗುವ ಹಂತಕ್ಕೆ ಹೋಗಿದ್ದು ರಕ್ಷಣೆಗಾಗಿ ಕೂಗಿಕೊಂಡಿದ್ದರು.
ಈ ವೇಳೆ ಅಲೆಗಳ ಸುಳಿಗೆ ಸಿಲುಕಿ ಮುಳುಗುತ್ತಿದ್ದ ಇಬ್ಬರೂ ಪ್ರವಾಸಿಗರನ್ನು ಕರ್ತವ್ಯನಿರತ ಲೈಫ್‌ಗಾರ್ಡ್ ಸಿಬ್ಬಂದಿಗಳಾದ ಹರೀಶ್ ಮೂಡಂಗಿ, ಮಂಜೇಶ್ ಹರಿಕಂತ್ರ, ಪ್ರಭಾಕರ ಅಂಬಿಗ ಇವರು ತಮ್ಮ ಜೀವದ ಹಂಗನ್ನು ತೊರೆದು ಪ್ರವಾಸಿಗರ ಜೀವ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.