ಬೆಂಗಳೂರು: ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ಹೋಗುತ್ತಿದ್ದ ಬೀದರ್ ಮೂಲದ ಐವರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಘಟನೆಗೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಅರಣ್ಯ ಸಚಿವ ಈಶ್ವರ ಖಂಡ್ರೆ ಮೃತರ ಕುಟುಂಬಕ್ಕೆ ಪರಿಹಾರ ಘೋಷಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಈಶ್ವರ ಖಂಡ್ರೆ, ಬೀದರ್ ನ ಲಡಗೇರಿಯಿಂದ 14 ಜನರು ಕುಂಭಮೇಳಕ್ಕೆ ಹೋಗುತ್ತಿದ್ದರು. ಕ್ರೂಸರ್ ವಾಹನ ಮತ್ತು ಲಾರಿ ನಡುವೆ ಡಿಕ್ಕಿ ಹೊಡೆದ ಪರಿಣಾಮ ಐವರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 8 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಈ ಘಟನೆ ಬಹಳ ನೋವಿನ ಸಂಗತಿ. ಮೃತರ ಕುಟುಂಬಗಳಿಗೆ ₹5 ಲಕ್ಷ ಪರಿಹಾರ ನೀಡಲಾಗುವುದು ಎಂದು ಹೇಳಿದರು.
ಮೃತರ ಪಾರ್ಥಿವ ಶರೀರವನ್ನು ಬೀದರ್‌ಗೆ ತರಲು ವ್ಯವಸ್ಥೆ ಮಾಡಲಾಗಿದೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗುವುದು. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಸಚಿವ ಖಂಡ್ರೆ ತಿಳಿಸಿದ್ದಾರೆ.