ಹೊಸಪೇಟೆ(ವಿಜಯನಗರ)ಆ.03: ವಿಜಯನಗರ ಜಿಲ್ಲೆಯಾದ್ಯಾಂತ ಜು.30ರಿಂದ ಆ.10ರವರೆಗೆ ಜರುಗುವ ಮೊಹರಂ ಹಬ್ಬದ ಆಚರಣೆಯನ್ನು ವಿಜಯನಗರ ಜಿಲ್ಲಾ ವ್ಯಾಪ್ತಿಯ 5 ಗ್ರಾಮಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ನಿಷೇಧಿಸಿ ಜಿಲ್ಲಾ ದಂಡಾಧಿಕಾರಿಗಳಾದ ಜಿಲ್ಲಾಧಿಕಾರಿ ಅನಿರುದ್ದ್ ಶ್ರವಣ್.ಪಿ ಅವರು ಆದೇಶ ಹೊರಡಿಸಿದ್ದಾರೆ.
ಮೊಹರಂ ಹಬ್ಬದ ಆಚರಣೆಯ ಸಂದರ್ಭದಲ್ಲಿ ವಿವಿಧ ಗ್ರಾಮಗಳಲ್ಲಿ ವೈಷಮ್ಯ ಇರುವುದರಿಂದ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜು.30ರಿಂದ ಆ.10ರವರೆಗೆ ಆಚರಿಸಲ್ಪಡುವ ಮೊಹರಂ ಹಬ್ಬವನ್ನು ನಿಷೇಧಿಸಿ ಆದೇಶ ಹೊರಡಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕೋರಿದ್ದು, ಮೊಹರಂ ಆಚರಿಸುವ ಸಂದರ್ಭದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಬಗ್ಗೆ ವರದಿಗಳು ಇರುವುದರಿಂದ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಪೊಲೀಸ್ ಬಂದೋಬಸ್ತ್ ಪರಿಣಾಮಕಾರಿಯಾಗಿ ಜಾರಿಗೆ ತರಲು ಮತ್ತು ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಕೆಲ ಗ್ರಾಮಗಳಲ್ಲಿ ಮೊಹರಂ ಹಬ್ಬದ ಆಚರಣೆ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.
ಮೋಹರಂ ಹಬ್ಬ ನಿಷೇಧಿಸಲ್ಪಟ್ಟ ಗ್ರಾಮಗಳ ವಿವರ:
ಹಗರಿಬೊಮ್ಮನಹಳ್ಳಿಯ ಹನಸಿ, ಹೊಸಪೇಟೆ ತಾಲೂಕಿನ ತಿಮ್ಮಲಾಪುರ, ಕೂಡ್ಲಿಗಿ ತಾಲೂಕಿನ ಐಗಳಮಲ್ಲಾಪುರ, ಹಿರೇಕುಂಬಳಗುಂಟೆ, ಟಿ.ಕಲ್ಲಹಳ್ಳಿ ಗ್ರಾಮಗಳಲ್ಲಿ ನಿಷೇಧಿಸಲಾಗಿದೆ ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.ನಿಷೇಧಾಜ್ಞೆ ಹೊರಡಿಸಲು ಕಾರಣವಾದ ಅಂಶಗಳನ್ನು ಡಿಸಿ ಅವರು ಹೊರಡಿಸಿದ ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.
ಸದರಿ ಗ್ರಾಮಗಳಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರು, ವಿಜಯನಗರ ಜಿಲ್ಲೆಯವರು ಕೋರಿರುವಂತೆ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಹಾಗೂ ಸದರಿ ಗ್ರಾಮಗಳಲ್ಲಿ ಜನರ ಗುಂಪು ಸೇರದಂತೆ ಮೇರವಣಿಗೆಯನ್ನು ತೆಗೆಯದಂತೆ ಮತ್ತು ಪಂಜಾಗಳನ್ನು ಕೂಡಿಸದಂತೆ ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.