ಕುಮಟಾ: ಹೊಸದಾಗಿ ಬಿಟ್ಟ ಫಸಲನ್ನು ಗದ್ದೆಯಿಂದ ಮನೆಗೆ ತರುವ ವಿಶೇಷ ಸಂಪ್ರದಾಯ ಕರಾವಳಿ ಭಾಗದಲ್ಲಿ ಆಚರಣೆ ಮಾಡಲಾಗುತ್ತದೆ. ಹೊಸ್ತು ಹಬ್ಬ ವೆಂದೇ ಕರೆಸಿಕೊಳ್ಳುವ ಈ ಹಬ್ಬದಲ್ಲಿ ಕೃಷಿಕರು ತಾವು ಬೆಳೆದ ಬೆಳೆಗೆ ಪೂಜೆ ಸಲ್ಲಿಸಿ, ಕದಿರು ಅಂದರೆ ಹೊಸ ತೆನೆಯನ್ನು ದೇವರಿಗೆ ಅರ್ಪಿಸಿ, ಬಳಿಕ ಅದನ್ನು ಮನೆಗೆ ತಂದು ಪೂಜೆ ಸಲ್ಲಿಸಲಾಗುತ್ತದೆ.
ತಾಲ್ಲೂಕಿನ ಬರ್ಗಿ ಗ್ರಾಮದಲ್ಲಿ ಬುಧವಾರದಂದು ಗ್ರಾಮಸ್ಥರೆಲ್ಲಾ ಸೇರಿ ಹೊಸ್ತು ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಿದರು. ಗ್ರಾಮ ದೇವತೆಗಳಾದ ಯಜಮಾನ, ಘಟಬೀರ ದೇವರ ಕಳಸ ಹೊತ್ತು ನೂರಾರು ಭಕ್ತರು ಗ್ರಾಮದ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿ ಮೊದಲು ಪೂಜೆ ಸಲ್ಲಿಸುತ್ತಾರೆ.
ಬಳಿಕ ಹೊಸ್ತು ಹಬ್ಬಕೆಂದೇ ಮೀಸಲಾಗಿಟ್ಟ ದೇವಸ್ಥಾನದ ಪಕ್ಕದ ಗದ್ದೆಗೆ ತೆರಳಿ, ಅರ್ಚಕರ ನೇತೃತ್ವದಲ್ಲಿ ಹೊಸ ತೆನೆಗೆ ಪೂಜೆ ಸಲ್ಲಿಸಲಾಗುತ್ತದೆ. ಬಳಿಕ ಪ್ರತಿಯೊಬ್ಬರೂ ಹೊಸ ಕದಿರನ್ನು ಕೊಯ್ದು ತಲೆಯ ಮೇಲೆ ಹೊತ್ತುಕೊಂಡು ಅವರವರ ಮನೆಗಳಿಗೆ ತೆರಳಿ ದೇವರ ಮನೆಯಲ್ಲಿಟ್ಟು ಪೂಜೆ ಸಲ್ಲಿಸುತ್ತಾರೆ.
ಮನೆಯಲ್ಲಿ ಸದಾ ಧಾನ್ಯಲಕ್ಷ್ಮೀ ನೆಲೆಸಲಿ ಎಂದು ಪ್ರಾರ್ಥಿಸಿ, ದೇವಸ್ಥಾನ ಹಾಗೂ ತಮ್ಮ ಗದ್ದೆಗಳಿಂದ ತಂದಿರುವ ಹೊಸ ಕದಿರನ್ನು ಮನೆಯ ಬಾಗಿಲು, ಕೃಷಿ ಉಪಕರಣಗಳಿಗೆ ಕಟ್ಟಿ ಹಬ್ಬವನ್ನು ಆಚರಣೆ ಮಾಡುತ್ತಾರೆ. ಈ ಮೂಲಕ ಭೂಮಿ ತಾಯಿಗೆ, ಆಹಾರ ಧಾನ್ಯಕ್ಕೆ ಗೌರವ ಸಲ್ಲಿಸಿ ಕೃತಜ್ಞತೆ ಅರ್ಪಿಸುವ ಆಚರಣೆಯಾಗಿ ಅನಾದಿ ಕಾಲದಿಂದ ಈ ಹೊಸ್ತು ಹಬ್ಬ ನಡೆದುಕೊಂಡು ಬಂದಿದೆ.