ಮುಂಬೈ: 2001ರಲ್ಲಿ ನಡೆದಿದ್ದ ಇಲ್ಲಿನ ಹೊಟೇಲ್ ಉದ್ಯಮಿ ಜಯ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ಯಾಂಗ್‌ಸ್ಟರ್ ಛೋಟಾ ರಾಜನ್‌ನ ಜೀವಾವಧಿ ಶಿಕ್ಷೆಯನ್ನು ಬಾಂಬೆ ಹೈಕೋರ್ಟ್ ಬುಧವಾರ ಅಮಾನತುಗೊಳಿಸಿ, ಪ್ರಕರಣದಲ್ಲಿ ಆತನಿಗೆ ಜಾಮೀನು ನೀಡಿದೆ. ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ದೇರೆ ಮತ್ತು ಪೃಥ್ವಿರಾಜ್ ಚವ್ಹಾಣ್ ಅವರ ವಿಭಾಗೀಯ ಪೀಠವು ಜಾಮೀನಿಗಾಗಿ 1 ಲಕ್ಷ ರೂಪಾಯಿಗಳ ಬಾಂಡ್ ಅನ್ನು ಒದಗಿಸುವಂತೆ ರಾಜನ್‌ಗೆ ಸೂಚಿಸಿದೆ. ಜಾಮೀನು ಮಂಜೂರಾದರೂ ಸಹ ಇತರೆ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಜನ್ ಜೈಲಿನಲ್ಲೇ ಇರಬೇಕಾಗಿದೆ.
ಕಳೆದ ಮೇ ತಿಂಗಳಲ್ಲಿ ವಿಶೇಷ ನ್ಯಾಯಾಲಯವು ಹೋಟೆಲ್ ಉದ್ಯಮಿಯ ಕೊಲೆ ಪ್ರಕರಣದಲ್ಲಿ ರಾಜನ್‌ನನ್ನು ದೋಷಿ ಎಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ಶಿಕ್ಷೆಯ ವಿರುದ್ಧ ರಾಜನ್ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದ. ಶಿಕ್ಷೆಯನ್ನು ಅಮಾನತುಗೊಳಿಸಬೇಕು ಮತ್ತು ಮಧ್ಯಂತರ ಜಾಮೀನು ನೀಡಬೇಕು ಎಂದು ಆತ ಕೋರಿದ್ದ.
ಸೆಂಟ್ರಲ್ ಮುಂಬೈನ ಗಾಮ್‌ದೇವಿಯಲ್ಲಿರುವ ಗೋಲ್ಡನ್ ಕ್ರೌನ್ ಹೋಟೆಲ್ ಮಾಲೀಕರಾಗಿದ್ದ ಜಯ ಶೆಟ್ಟಿ ಅವರನ್ನು ಮೇ 4, 2001 ರಂದು ಹೋಟೆಲ್‌ನ ಮೊದಲ ಮಹಡಿಯಲ್ಲಿ ರಾಜನ್ ಗ್ಯಾಂಗ್‌ನ ಇಬ್ಬರು ಸದಸ್ಯರು ಗುಂಡಿಕ್ಕಿ ಕೊಂದಿದ್ದರು. ತನಿಖೆಯ ವೇಳೆ ಉದ್ಯಮಿ ಜಯ ಶೆಟ್ಟಿ ಅವರಿಗೆ ಛೋಟಾ ರಾಜನ್ ಗ್ಯಾಂಗ್‌ನ ಹೇಮಂತ್ ಪೂಜಾರಿ ಅವರಿಂದ ಹಫ್ತಾ ನೀಡುವಂತೆ ಬೆದರಿಕೆ ಕರೆಗಳು ಬಂದಿರುವುದು ತಿಳಿದುಬಂದಿತ್ತು.
ಆದರೆ ಜಯ ಶೆಟ್ಟಿ ಅವರು ಬೆದರಿಕೆಗೆ ಹೆದರದೇ ಹಫ್ತಾ ನೀಡಲು ನಿರಾಕರಿಸಿದ ಹಿನ್ನಲೆ ಛೋಟಾ ರಾಜನ್ ಗ್ಯಾಂಗ್ ಸದಸ್ಯರು ಅವರನ್ನು ಹತ್ಯೆ ಮಾಡಿದ್ದರು. ಹಿರಿಯ ಅಪರಾಧ ವರದಿಗಾರ ಜೆ ಡೇ ಅವರ ಹತ್ಯೆ ಪ್ರಕರಣದಲ್ಲಿ ಈಗಾಗಲೇ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ರಾಜನ್ ಸದ್ಯ ದೆಹಲಿಯ ತಿಹಾರ್ ಜೈಲಿನಲ್ಲಿದ್ದಾನೆ.