ಘಾಜಿಯಾಬಾದ್: ಘಾಜಿಯಾಬಾದ್‌ನಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ 13 ವರ್ಷದ ಬಾಲಕನನ್ನು ಆತನ ಸ್ನೇಹಿತರು ಪ್ರೇಮ ವಿವಾದಕ್ಕೆ ಸಂಬಂಧಿಸಿದಂತೆ ಬರ್ಬರವಾಗಿ ಹತ್ಯೆಗೈದಿದ್ದಾರೆ. ಮಾರ್ಚ್ 3 ರಂದು ನಡೆದ ಈ ಘಟನೆಯನ್ನು 10 ದಿನಗಳ ಮುಂಚಿತವಾಗಿ ಪ್ಲ್ಯಾನ್ ಮಾಡಲಾಗಿತ್ತು ಎಂದು ಹೇಳಲಾಗುತ್ತಿದೆ.
ಪೊಲೀಸ್ ವರದಿಗಳ ಪ್ರಕಾರ, ವೀಡಿಯೊ ಮಾಡುವ ನೆಪದಲ್ಲಿ ಹುಡುಗನನ್ನು ಅವನ ಸ್ನೇಹಿತರು ಕರೆದೊಯ್ದಿದ್ದಾರೆ. ನಂತರ, ಆತನ ರಕ್ತಸಿಕ್ತ ದೇಹವು ಪಾರ್ಶ್ವನಾಥ ಸ್ವರ್ಗದ ಶಿಥಿಲಗೊಂಡ ಕಟ್ಟಡದ ಒಂಬತ್ತನೇ ಮಹಡಿಯಲ್ಲಿ ಪತ್ತೆಯಾಯಿತು.
ಕೊಲೆಯನ್ನು 10 ದಿನಗಳ ಮುಂಚಿತವಾಗಿ ಯೋಜಿಸಲಾಗಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ. ಆರೋಪಿಗಳಲ್ಲಿ ಒಬ್ಬ, 7ನೇ ತರಗತಿಯ ವಿದ್ಯಾರ್ಥಿ, ಬಾಲಕನ ಮೇಲೆ ಹಿಂದಿನಿಂದ ಹಲ್ಲೆ ಮಾಡಿದ್ದಾನೆ. 10ನೇ ತರಗತಿಯ ವಿದ್ಯಾರ್ಥಿ ಆತನ ಮೇಲೆ ಇಟ್ಟಿಗೆಯಿಂದ ಹಲ್ಲೆ ಮಾಡಿದ್ದಾನೆ. ಆತ 7ನೇ ತರಗತಿಯ ವಿದ್ಯಾರ್ಥಿ ನೀಡಿದ ಚಾಕುವಿನಿಂದ ಆತನ ಹೊಟ್ಟೆಗೆ ಇರಿದು ನಂತರ ಕಲ್ಲಿನಿಂದ ಆತನ ಮುಖವನ್ನು ಜಜ್ಜಿದ್ದಾನೆ. ಈ ಘಟನೆಯಿಂದ ಸ್ಥಳೀಯರು ಆಘಾತಕ್ಕೊಳಗಾಗಿದ್ದಾರೆ.
ಘಟನೆಯ ನಂತರ, ಇಬ್ಬರು ಅಪ್ರಾಪ್ತ ಶಂಕಿತರನ್ನು ವಶಕ್ಕೆ ತೆಗೆದುಕೊಂಡು ಬಾಲಾಪರಾಧಿ ನ್ಯಾಯಾಲಯಕ್ಕೆ ಕಳುಹಿಸಲಾಗಿದೆ. ಪೊಲೀಸರು ತಮ್ಮ ತನಿಖೆಯನ್ನು ಮುಂದುವರಿಸಿದ್ದಾರೆ. ಈ ಪ್ರಕರಣವು ಸ್ಥಳೀಯರಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.