ಚಾಮರಾಜನಗರ: ಬೆಳಗಿನ ಜಾವ ಬೈಕ್‌ನಲ್ಲಿ ತೆರಳುತ್ತಿದ್ದ ಸವಾರರಿಬ್ಬರು ವಿದ್ಯುತ್ ತಂತಿ ತಗುಲಿ ಸ್ಥಳದಲ್ಲೇ ಕೊನೆಯುಸಿರೆಳೆದ ದುರಂತ ಸಂಭವಿಸಿದೆ. ಚಾಮರಾಜನಗರ ತಾಲ್ಲೂಕಿನ ಅಯ್ಯನಪುರ ಗ್ರಾಮದ ಬಳಿ ಅವಘಡ ಸಂಭವಿಸಿದ್ದು, ಗ್ರಾಮದ ನಿವಾಸಿಗಳಾಗಿದ್ದ ನಾಗೇಂದ್ರ(40) ಹಾಗೂ ಮಲ್ಲೇಶ್(40) ವಿದ್ಯುತ್ ಶಾಕ್‌ಗೆ ಬಲಿಯಾಗಿದ್ದಾರೆ.
ನಾಗೇಂದ್ರ ಹಾಗೂ ಮಲ್ಲೇಶ ಕೆಲಸದ ನಿಮಿತ್ತ ಗ್ರಾಮದಿಂದ ಬೈಕ್ ಏರಿ ಜಮೀನಿನತ್ತ ಹೊರಟಿದ್ದರು. ರಾತ್ರಿ ಜೋರಾಗಿ ಬೀಸಿದ್ದ ಗಾಳಿಗೆ ರಸ್ತೆ ಪಕ್ಕದ ವಿದ್ಯುತ್ ಕಂಬಗಳಿಂದ ವಿದ್ಯುತ್ ತಂತಿ ಜೋತು ಬಿದ್ದಿದೆ. ಸವಾರರಿಗೆ ಇದು ಕಂಡಿಲ್ಲವಾಗಿದ್ದು ಬೈಕ್ ಚಲಾಯಿಸುತ್ತಿರುವಾಗಲೇ ವಿದ್ಯುತ್ ತಂತಿ ಕುತ್ತಿಗೆಗೆ ಸಿಲುಕಿ ಶಾಕ್ ತಗುಲಿ ಇಬ್ಬರೂ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಬಳಿಕ ರಸ್ತೆಯಲ್ಲಿ ತೆರಳುತ್ತಿದ್ದ ಸ್ಥಳೀಯರು ಗಮನಿಸಿ ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದು ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ವಿದ್ಯುತ್ ಕಂಬಗಳ ಸೂಕ್ತ ನಿರ್ವಹಣೆ ಇಲ್ಲದ್ದರಿಂದಲೇ ವಿದ್ಯುತ್ ತಂತಿ ತಗುಲಿ ಇಬ್ಬರು ಪ್ರಾಣ ಬಿಡುವಂತಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.




