ಅಂಕೋಲಾ: ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63ರ ಕಂಚಿನಬಾಗಿಲು ಬಳಿ ಕಾರೊಂದು ಪಲ್ಟಿಯಾದ ಪರಿಣಾಮ ಕಾರಿನಲ್ಲಿದ್ದ ನಾಲ್ವರ ಪೈಕಿ ಓರ್ವ ಸಾವನ್ನಪ್ಪಿದ್ದು,ಉಳಿದವರಿಗೆ ಗಂಭೀರ ಗಾಯಗಳಾದ ಘಟನೆ ನಡೆದಿದೆ.
ಕಾರವಾರದ ಸಂಬಂಧಿಕರ ಮನೆಯಲ್ಲಿ ತಿಥಿ ಕಾರ್ಯ ಮುಗಿಸಿ KA25 MA 2308 ನಂಬರಿನ ಮಾರುತಿ ಸುಜುಕಿ ಆಲ್ಟೋ ಕಾರಿನಲ್ಲಿ ನಾಲ್ವರು ಕುಟುಂಬಸ್ಥರು ಹುಬ್ಬಳ್ಳಿಗೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ 63ರ ಕಂಚಿನಬಾಗಿಲು ಬಳಿಯ ತಿರುವಿನಲ್ಲಿ ರಸ್ತೆಗೆ ಅಡ್ಡಬಂದ ಆಕಳನ್ನು ತಪ್ಪಿಸಲು ಹೋಗಿ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿಯಲ್ಲಿ ಪಲ್ಟಿಯಾಗಿದೆ. ಕಾರಿನಲ್ಲಿದ್ದ ನಾಲ್ವರ ಪೈಕಿ ಓರ್ವ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಉಳಿದ ಮೂವರನ್ನು ಅಂಕೋಲಾ ತಾಲೂಕಾಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತ ಸಂಭವಿಸುತ್ತಲೇ ಅಲ್ಲಿಯೇ ಇದ್ದ ಸ್ಥಳೀಯರು ನೆರವಿಗೆ ಬಂದು ಕಾರಿನಲ್ಲಿದ್ದವರ ರಕ್ಷಣೆಗೆ ಮುಂದಾಗಿದ್ದರು ಹಾಗೆಯೇ ಸ್ಥಳೀಯನೊರ್ವ ಆಂಬ್ಯುಲೆನ್ಸ್ ಗೆ ಕರೆ ಮಾಡಿದರೂ ಸಹ 1 ಗಂಟೆ ತಡವಾಗಿ ಬಂದಿದ್ದರಿಂದ ಗಾಯಾಳುವಿನ ಪ್ರಾಣಪಕ್ಷಿ ಹಾರಿಹೋಗಿದ್ದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.