ಮಂಡ್ಯ: ಮದ್ದೂರು ತಾಲೂಕಿನ ಲಕ್ಷ್ಮೆಗೌಡಾನದೊಡ್ಡಿ ಗ್ರಾಮದ ಕೃಷ್ಣ ಗೌಡ ಕೊಲೆ ಪ್ರಕರಣವನ್ನು ಭೇದಿಸಿರುವ ಪೊಲೀಸರು, ವ್ಯಕ್ತಿ ಕೊಲೆಗೆ ಆತನ ಸಹೋದರನೇ ಕಾರಣ ಎಂದು ತಿಳಿದುಬಂದಿದೆ. ತನ್ನ ತಮ್ಮನ ಹತ್ಯೆಗೆ ಸುಪಾರಿ ನೀಡಿದ ಅಣ್ಣ ಕೊಲೆಗೆ ನಾಲ್ಕೈದು ದಿನಗಳ ಮೊದಲು ಮತ್ತೊಬ್ಬ ಆರೋಪಿಯೊಂದಿಗೆ ಪ್ರಯಾಗ್ ರಾಜ್ ಕುಂಭಮೇಳಕ್ಕೆ ಹೋಗಿದ್ದು, ತನಗೇನೂ ಗೊತ್ತಿಲ್ಲ ಎನ್ನುವಂತೆ ತೋರಿಸಿಕೊಳ್ಳಲು ಪ್ಲ್ಯಾನ್ ಮಾಡಿದ್ದು ಬೆಳಕಿಗೆ ಬಂದಿದೆ.
ಕೃಷ್ಣ ಗೌಡ ಅವರನ್ನು ಫೆಬ್ರವರಿ 11ರಂದು ಹತ್ಯೆ ಮಾಡಲಾಗಿತ್ತು. ಅವರ ಸಹೋದರ ಶಿವನಂಜೆ ಗೌಡ ಅಲಿಯಾಸ್ ಗುಡ್ಡಪ್ಪ ಸಹೋದರನ ಹತ್ಯೆಗೆ 5 ಲಕ್ಷ ರೂ. ಸುಪಾರಿ ನೀಡಿದ್ದ. ಪ್ರಕರಣದ ಆರೋಪಿ ಚಂದ್ರಶೇಖರ್ N.S. ಮಳವಳ್ಳಿ ತಾಲ್ಲೂಕಿನವನನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದ್ದು, ಆತ ಸುಪಾರಿ ತೆಗೆದುಕೊಂಡಿದ್ದನ್ನು ಒಪ್ಪಿಕೊಂಡಿದ್ದಾನೆ. ಎಲ್ಲಾ 8 ಆರೋಪಿಗಳನ್ನು ಈಗ ಬಂಧಿಸಲಾಗಿದೆ ಎಂದು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ.
ಅವರ ಹಿರಿಯ ಸಹೋದರ ಶಿವನಂಜೆ ಗೌಡರು ಕೃಷ್ಣ ಗೌಡ ಅವರ ಸಾಲವನ್ನು ತೀರಿಸಿದ್ದರು. ಇದಕ್ಕೆ ಪ್ರತಿಯಾಗಿ, ಕೃಷ್ಣ ಗೌಡರು ತಮ್ಮ ಭೂಮಿಯನ್ನು ಶಿವನಂಜೆ ಗೌಡ ಅವರ ಪತ್ನಿಯ ಹೆಸರಿಗೆ ವರ್ಗಾಯಿಸಿದ್ದರು. ಆದರೆ ಅವರು ಜಮೀನನ್ನು ಬಿಟ್ಟುಕೊಡಲಿಲ್ಲ ಮತ್ತು ಅವರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಇದರಿಂದ ಕೋಪಗೊಂಡ ಶಿವನಂಜೆ ಗೌಡ ತನ್ನ ಕಿರಿಯ ಸಹೋದರನನ್ನು ಕೊಲ್ಲಲು ಸಂಚು ರೂಪಿಸಿ ಹತ್ಯೆ ಮಾಡಿಸಿದ್ದು ತನಿಖೆಯಿಂದ ಬಯಲಾಗಿದೆ.