ಕುಮಟಾ: ಬೈಕ್ ಮೇಲೆ ಚಲಿಸುತ್ತಿದ್ದ ವೇಳೆ ಅಡ್ಡ ಬಂದ ನಾಯಿಯನ್ನು ತಪ್ಪಿಸಲು ಹೋಗಿ ಬೈಕ್ ಹಿಂಬದಿಯಲ್ಲಿ ಕುಳಿತ ಮಹಿಳೆ ರಸ್ತೆಯಲ್ಲಿ ಬಿದ್ದು ಮೃತಪಟ್ಟ ಧಾರುಣ ಘಟನೆ ಉತ್ತರಕನ್ನಡ ಜಿಲ್ಲೆಯ ಕುಮಟಾ ಪಟ್ಟಣದ ಗುಡೇಅಂಗಡಿಯಲ್ಲಿ ನಡೆದಿದೆ.
ಮೃತ ಮಹಿಳೆ ಸುಮಾ ಮಡಿವಾಳ (32) ಎಂದು ಗುರುತಿಸಲಾಗಿದೆ. ಇವರು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಉದ್ಯೋಗಿಯಾಗಿದ್ದರು. ಪ್ರಶಾಂತ್ ಮಡಿವಾಳ ಬೈಕ್ ಚಲಾಯಿಸುತ್ತಿದ್ದಾಗ ನಾಯಿ ಅಡ್ಡ ಬಂದಿದ್ದು ಅದಕ್ಕೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಈ ಅಪಘಾತ ಸಂಭವಿಸಿದೆ.
ಸುಮಾ ರವಿವಾರ ಬೆಳಗ್ಗೆ ಅವರ ಸೈಕಲ್ ರಿಪೇರಿಗಾಗಿ ಪ್ರಶಾಂತ್ ಮಡಿವಾಳ ಅವರ ಬೈಕ್‌ನಲ್ಲಿ, ಹೊಲನಗದ್ದೆಯಿಂದ ಕುಮಟಾಕ್ಕೆ ಹೊರಟಿದ್ದರು. ನಾಗಶ್ರೀ ವಾಟರ್ ಸರ್ವೀಸ್ ಸೆಂಟರ್ ಬಳಿ ಏಕಾಏಕಿ ನಾಯಿ ಅಡ್ಡ ಬಂದಿದ್ದರಿಂದ, ಪ್ರಶಾಂತ್ ಮಡಿವಾಳ ಬೈಕ್ ನಿಲ್ಲಿಸಲು ಬ್ರೇಕ್ ಹಾಕಿದ್ದರು.
ಈ ವೇಳೆ ಹಿಂಬದಿಯಲ್ಲಿ ಕುಳಿತಿದ್ದ ಸುಮಾ ಮಡಿವಾಳ ರಸ್ತೆಯಲ್ಲಿ ಬಿದ್ದಿದ್ದು, ಪರಿಣಾಮ ತಲೆಗೆ ಪೆಟ್ಟು ಬಿದ್ದು, ತಲೆ ಹಾಗೂ ಮೂಗಿನಿಂದ ರಕ್ತಸ್ರಾವ ಉಂಟಾಗಿದೆ. ತಕ್ಷಣ ಅಂಬುಲೆನ್ಸ್ ಮೂಲಕ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಆಸ್ಪತ್ರೆ ತಲುಪುವ ವೇಳೆಗಾಗಲೇ ಕೊನೆಯುಸಿರೆಳೆದಿದ್ದಾರೆ.
ಕುಮಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.