ದಾವಣಗೆರೆ ಆ.05: ಮಗು ಜನಿಸಿದ ಒಂದು ಗಂಟೆ ಒಳಗೆ ಎದೆ ಹಾಲನ್ನು ಕುಡಿಸಬೇಕು, ಏಕೆಂದರೆ ತಾಯಿ ಎದೆ ಹಾಲು ಮಗುವಿಗೆ ಲಸಿಕೆಯಂತೆ ಕೆಲಸ ಮಾಡುತ್ತದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ದೇವರಾಜ್.ಪಿ.ಪಟಗೆ ಹೇಳಿದರು
ದಾವಣಗೆರೆ ತಾಲ್ಲೂಕಿನ ಹದಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಾಲ್ಲೂಕು ಮಟ್ಟದ ವಿಶ್ವ ಸ್ತನ್ಯ ಪಾನ ದಿನಾಚರಣೆ ಮತ್ತು ತೀವ್ರತರ ಅತೀಸಾರ ಭೇದಿ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ತಾಯಿ ಮೊದಲಿಗೆ ಕುಡಿಸುವ ಎದೆ ಹಾಲಿನಲ್ಲಿ ರೋಗ ನಿರೋಧಕ ಶಕ್ತಿಯಿದ್ದು, ಅಗತ್ಯವಾದ ಪೋಷಕಾಂಶ, ಖನಿಜಾಂಶಗಳು ತಾಯಿಯ ಎದೆ ಹಾಲಿನಿಂದ ದೊರೆಯುತ್ತವೆ. ಇದರಿಂದ ಶಿಶು ಸದೃಢವಾಗಿ ಬೆಳೆಯಲು ಅನುಕೂಲವಾಗುತ್ತದೆ. ಸಾಂಕ್ರಾಮಿಕ ರೋಗಗಳ ಹೋರಾಟಕ್ಕೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಆರು ತಿಂಗಳ ತನಕ ಎದೆ ಹಾಲನ್ನು ಬಿಟ್ಟು ಬೇರೆ ಯಾವುದೇ ರೀತಿಯ ಹಾಲನ್ನು ನೀಡಬಾರದು, 06 ತಿಂಗಳ ನಂತರ ಪೂರಕ ಆಹಾರವಾಗಿ ಬಾಳೆಹಣ್ಣು, ಮೆತ್ತನೆಯ ಆಹಾರದ ಹೂರಣವನ್ನು ನೀಡಬೇಕು ಎಂದು ತಿಳಿಸಿದರು.
ದಾವಣಗೆರೆ ತಾಲ್ಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಉಮಾಪತಿ.ಹೆಚ್ ಮಾತನಾಡಿ, ಮಕ್ಕಳಿಗೆ ಬರುವ ಅತೀಸಾರ ಭೇದಿಯಿಂದ ಮಕ್ಕಳ ಮರಣವು ಸಂಭವಿಸುತ್ತದೆ, ಅದಕ್ಕೆ ಓ.ಆರ್.ಎಸ್. ಮತ್ತು ಜಿಂಕ್ ಪರಿಣಾಮಕಾರಿ ಔಷಧವಾಗಿರುತ್ತದೆ. ಒಂದು ಲೀಟರ್ ನೀರಿಗೆ ಒಂದು ಪ್ಯಾಕೆಟ್ ಓ.ಆರ್.ಎಸ್‍ನ್ನು ಮಿಶ್ರಣ ಮಾಡಿ ಭೇದಿ ನಿಲ್ಲುವವರೆಗೂ ಕೊಡುವುದರಿಂದ ನಿರ್ಜಲಿಕರಣವನ್ನು ತಡೆಗಟ್ಟಿ ಮಕ್ಕಳ ಮರಣವನ್ನು ತಡೆಗಟ್ಟಬಹುದು.
ಅದೇರೀತಿ ಜಿಂಕ್ ಮಾತ್ರೆಗಳನ್ನು ಪ್ರತೀ ದಿನ ಒಂದರಂತೆ 14 ದಿನಗಳವರೆಗೆ ಮಗುವಿಗೆ ನೀಡುವುದರಿಂದ ಶಕ್ತಿಯನ್ನು ವೃದ್ಧಿಸಬಹುದು. ಮಗುವಿನಲ್ಲಿ ಮಲದ ಮಾದರಿಯು ಬದಲಾದಾಗ ಸಾಮಾನ್ಯಕ್ಕಿಂತ ಹೆಚ್ಚು ಬಾರಿ ನೀರಿನಂತೆ ಆಗುವ ಬೇದಿಯನ್ನು ಅತೀಸಾರ ಬೇದಿ ಎಂದು ಕೆರೆಯುತ್ತೇವೆ. ಇದನ್ನು ಗುರುತಿಸುವುದು ಮಗುವಿನ ಕಣ್ಣುಗಳು ಒಳಗೆ ಹೋದಂತೆ ಕಂಡು ಬುರುವುದು, ಮಗುವಿನ ಹೊಟ್ಟೆಯ ಚರ್ಮವನ್ನು ಚಿವುಟಿ ಎಳೆದು ಬಿಟ್ಟಾಗ ನಿಧಾನವಾಗಿ ಯಥಾಸ್ಥಿತಿಗೆ ಬರುವುದನ್ನು ಗಮನಿಸಿ ದೇಹದಲ್ಲಿ ನೀರಿನ ಅಂಶದ ಕೊರತೆ ಇರುವುದನ್ನು ಗಮನಿಸಿ ಪೋಷಕರು ವೈದ್ಯರ ಬಳಿ ಸೂಕ್ತ ಚಿಕಿತ್ಸೆ ಕೊಡಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಡಾ.ಧನಂಜಯ್, ಡಾ.ರೂಪಾ, ಜಿಲ್ಲಾ ಆರೋಗ್ಯ ಮೇಲ್ವಿಚಾರಕ ಎಂ.ವಿ.ಹೊರಕೇರಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳು ಮಹಾದೇವಯ್ಯ, ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಶಕುಂತಲಮ್ಮ, ಆರೋಗ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತೆಯರು, ತಾಯಂದಿರು ಉಪಸ್ಥಿತರಿದ್ದರು.