ದಾವಣಗೆರೆ: ವಿಧಾನಸಭಾ ಚುನಾವಣೆಗೆ ಎಲ್ಲಾ ರಾಜಕೀಯ ಪಕ್ಷಗಳು ಭರ್ಜರಿ ತಯಾರಿ ಶುರುಮಾಡಿದ್ದು, ಚುನಾವಣೆ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಾರ್ಟಿಯ ರಾಜ್ಯ ಮಟ್ಟದ ಕಾರ್ಯಕರ್ತರ ಮೊದಲ ಸಮಾವೇಶ ದಾವಣಗೆರೆಯಲ್ಲಿ ನಡೆಯಲಿದೆ.
ಹೌದು, ಬೆಣ್ಣೆ ನಗರಿ ದಾವಣಗೆರೆಯಿಂದ ಚುನಾವಣಾ ಪ್ರಚಾರಕ್ಕೆ ಕಿಚ್ಚು ಹಚ್ಚಲು ಆಪ್ ಪಕ್ಷದ ಪ್ರಮುಖ ನಾಯಕರಾದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಪಂಜಾಬ್ ಸಿಎಂ ಭಗವಂತ ಮಾನ್ ಪಾಲ್ಗೊಳ್ಳಲಿದ್ದಾರೆ. ಇದೀಗ ರಾಜ್ಯದಲ್ಲಿ ಆಮ್ ಆದ್ಮಿಗೆ ನೆಲೆ ಕಲ್ಪಿಸಲು ದಾವಣಗೆರೆಯಿಂದಲೇ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲು ಎಎಪಿ ನಾಯಕರು ನಿರ್ಧರಿಸಿದ್ದು, ಅರವಿಂದ್ ಕೇಜ್ರಿವಾಲ್ ಇಂದು (ಮಾರ್ಚ್ 04) ಬೆಣ್ಣೆ ನಗರಿಗೆ ಆಗಮಿಸಲಿದ್ದಾರೆ.
ಇನ್ನು, 60,000ಕ್ಕೂ ಅಧಿಕ ಕಾರ್ಯಕರ್ತರು ಆಪ್ ಸಮಾವೇಶದಲ್ಲಿ ಭಾಗವಹಿಸುವ ನಿರೀಕ್ಷೆಯಿದ್ದು, ದೆಹಲಿಯಿಂದ ಬೆಂಗಳೂರಿಗೆ ಬರಲಿರುವ ನಾಯಕರು ನಂತರ ಹೆಲಿಕಾಪ್ಟರ್ ಮೂಲಕ ದಾವಣಗೆರೆ ತಲುಪಲಿದ್ದಾರೆ.