ಕಾರವಾರ: ಅಂಕೋಲಾ ಮತ್ತು ಕುಮಟಾ ತಾಲ್ಲೂಕಿನ ನಡುವಿನ ಸಂಪರ್ಕ ಸೇತುವೆಯಾಗಿರುವ ಮಂಜಗುಣಿ ಗಂಗಾವಳಿ ಸೇತುವೆಯ ಕಾಮಗಾರಿಯನ್ನು ಶೀಘ್ರದಲ್ಲಿ ಪೂರ್ಣಗೊಳಿಸುವಂತೆ ಒತ್ತಾಯಿಸಿ ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಘಟಕದ ಮೂಲಕ ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಅವರಿಗೆ ಮನವಿ ಸಲ್ಲಿಸಲಾಯಿತು.
ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮತ್ತು ಅಂಕೋಲಾ ತಾಲೂಕಿನ ನಡುವಿನ ಸಂಪರ್ಕ ಸೇತುವೆಯಾಗಿರುವ ಮಂಜಗುಣಿ ಗಂಗಾವಳಿ ಬಹುಕೋಟಿ ವೆಚ್ಛದ ಸೇತುವೆ ಕಾಮಗಾರಿಯು ಕಳೆದ 6 ವರ್ಷಗಳಿಂದ ನಡೆಯುತ್ತಿದೆ. ಆಮೆಗತಿಯಲ್ಲಿ ನಡೆಯುತ್ತಿರುವ ಕಾಮಗಾರಿಯಿಂದಾಗಿ 2 ವರ್ಷ ಗಂಗಾವಳಿ ನದಿಯ ಪ್ರವಾಹದಿಂದ ಕೃತಕವಾಗಿ ನೆರೆ ಉಂಟಾಗಿ ನದಿಪಾತ್ರದ ಜನರು ಪರದಾಡುವಂತಾಗಿತ್ತು. ಅಲ್ಲದೇ ಅಪೂರ್ಣ ಸೇತುವೆಯಿಂದಾಗಿ ಜನರಿಗೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗಿದೆ.
ದೇಶದ ಪ್ರಸಿದ್ಧ ಪ್ರವಾಸಿ ಸ್ಥಳವಾಗಿರುವ ಗೋಕರ್ಣವನ್ನು ಅಂಕೋಲಾ ಭಾಗದಿಂದ ಸಂಪರ್ಕಿಸಲು ಇದೇ ಸೇತುವೆ ಸಂಪರ್ಕ ಕೊಂಡಿ ಆಗಲಿದೆ. ನಿತ್ಯವೂ ನೂರಾರು ಜನರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಿಗಳು ಮತ್ತು ಜನಸಾಮಾನ್ಯರು ಈ ಸೇತುವೆಯ ಸಂಪರ್ಕವನ್ನೇ ಆಶ್ರಯಿಸಿದ್ದಾರೆ. ಸ್ಥಳೀಯರು ಮತ್ತು ವಿವಿಧ ಸಂಘಟನೆಗಳ ಹೋರಾಟದ ಫಲವಾಗಿ ಸೇತುವೆಯ ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ. ಆದರೆ ಸೇತುವೆಯ ಎರಡು ಭಾಗಗಳಲ್ಲಿ ಸಂಪರ್ಕ ರಸ್ತೆ ನಿರ್ಮಾಣಗೊಂಡಿಲ್ಲ. ಮಣ್ಣು ಭರಾವು ಮಾಡಿ ತಾತ್ಕಾಲಿಕ ಸಂಪರ್ಕ ಕಲ್ಪಿಸಲಾಗಿದೆ. ಇದರಿಂದ ಸಂಚಾರವು ಸಮರ್ಪಕವಾಗಿಲ್ಲ ಮತ್ತು ಪಾದಾಚಾರಿಗಳಿಗೂ ಸಾರ್ವಜನಿಕರಿಗೂ ಅಡಚಣೆ ಉಂಟಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಸೇತುವೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜಯ ಕರ್ನಾಟಕ ಜನಪರ ವೇದಿಕೆಯ ಜಿಲ್ಲಾ ಘಟಕ ಮತ್ತು ಸಮಸ್ತ ಸದಸ್ಯರುಗಳ ಮನವಿ ಮೂಲಕ ಆಗ್ರಹಿಸಿದ್ದಾರೆ. ಮುಂದಿನ ಒಂದು ತಿಂಗಳ ಒಳಗೆ ಸೇತುವೆಯ ಕಾಮಗಾರಿ ಪೂರ್ಣಗೊಳಿಸಬೇಕು. ಇಲ್ಲವೇ ಜಿಲ್ಲಾಡಳಿತ ಅಥವಾ ಸಂಬಂಧಿಸಿದ ಜನಪ್ರತಿನಿಧಿಗಳು ಅಧಿಕಾರಿಗಳು ಕಾಮಗಾರಿ ಅಪೂರ್ಣವಾಗಲು ಇರುವ ತೊಡಕುಗಳು ಮತ್ತು ಕಾರಣವನ್ನು ಬಹಿರಂಗಪಡಿಸಬೇಕು. ಇಲ್ಲವಾದಲ್ಲಿ ಸ್ಥಳೀಯ ಗ್ರಾಮಸ್ಥರ ಸಹಕಾರದಿಂದ ಉಗ್ರ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ ಎಂದು ಸಂಘಟನೆಯ ಸದಸ್ಯರು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ದಿಲೀಪ್ ಜಿ ಅರ್ಗೇಕರ್, ಜಿಲ್ಲಾ ಕಾರ್ಯಾಧ್ಯಕ್ಷ ರೋಷನ್ ಹರಿಕಂತ್ರ, ಜಿಲ್ಲಾ ಕಾರ್ಯದರ್ಶಿ ಸುದೇಶ್ ನಾಯ್ಕ, ಜಿಲ್ಲಾ ಸಂಚಾಲಕ ಸುನಿಲ್ ತಾಂಡೇಲ್, ತಾಲೂಕು ಅಧ್ಯಕ್ಷ ಮೋಹನ್ ಉಳ್ವೇಕರ್, ಸಂಘಟನೆಯ ಪ್ರಮುಖರಾದ ನಂದೀಶ್ ಮಾಜಾಳಿಕರ, ಗಣರಾಜ್ಯ ಟಾಕೇಕರ್ ಉಪಸ್ಥಿತರಿದ್ದರು.