ದಾವಣಗೆರೆ ಆ.10 :ಸ್ತ್ರೀಶಕ್ತಿ ಗುಂಪುಗಳು ತಯಾರಿಸುವ ಫಿನೈಲ್ ಸೇರಿದಂತೆ ಇತರೆ ಉತ್ಪನ್ನಗಳನ್ನು ಸರ್ಕಾರಿ ಕಚೇರಿಗಳು ಹಾಗೂ ಹಾಸ್ಟೆಲ್‍ಗಳಲ್ಲಿ ಬಳಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಡಾ. ಎ.ಚನ್ನಪ್ಪ ಹೇಳಿದರು.
ಬುಧವಾರ ಜಿ.ಪಂ ಸಭಾಂಗಣದಲ್ಲಿ ನಡೆದ ಸ್ತ್ರೀಶಕ್ತಿ ಯೋಜನೆ ಹಾಗೂ ಮಹಿಳೆಯರ ಮತ್ತು ಮಕ್ಕಳ ಸಾಗಾಣಿಕೆ ತಡೆಗಟ್ಟುವ ಜಿಲ್ಲಾ ಮಟ್ಟದ ಕಾವಲು ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ನೋಂದಾಯಿತ ಸ್ತ್ರೀಶಕ್ತಿ ಸ್ವ-ಸಹಾಯ ಸಂಘಗಳು ಆದಾಯೋತ್ಪನ್ನ ಚಟುವಟಿಕೆಗಳ ಮೂಲಕ ತಯಾರಿಸುವ ಫಿನೈಲ್, ಹಪ್ಪಳ, ಉಪ್ಪಿನಕಾಯಿ, ಗೊಂಬೆಗಳು, ಅಗರಬತ್ತಿ ಸೇರಿದಂತೆ ವಿವಿಧ ವಸ್ತುಗಳನ್ನು ಸರ್ಕಾರಿ ಕಚೇರಿಗಳು ಮತ್ತು ಹಾಸ್ಟೆಲ್‍ಗಳಲ್ಲಿ ಬಳಸಲು ಖರೀದಿಸಲು ಆದೇಶಿಸಲಾಗುವುದು. ಮಹಾನಗರ ಪಾಲಿಕೆ ವ್ಯಾಪ್ತಿಯ ರೈಲ್ವೆ ಸ್ಟೇಷನ್ ಮತ್ತು ಮಬಸ್‍ಸ್ಟ್ಯಾಂಡ್‍ಗಳಲ್ಲಿ ಮಾರಾಟಕ್ಕೆ ಅನುಕೂಲವಾಗುವಂತೆ ಮಳಿಗೆ ಒದಗಿಸಲಾಗುವುದು ಎಂದರು.
ಮಹಿಳೆಯರ ಮತ್ತು ಮಕ್ಕಳ ಕಳ್ಳ ಸಾಗಾಣಿಕೆ ಚಟುವಟಿಕೆಯು ಕಾನೂನುಬಾಹಿರವಾಗಿದೆ. ಇದನ್ನು ತಡೆಗಟ್ಟಲು ಸಂಬಂಧಪಟ್ಟ ಅಧಿಕಾರಿಗಳು ಚುರುಕಾಗಿ ಕಾರ್ಯನಿರ್ವಹಿಸಬೇಕು. ಆಸ್ಪತ್ರೆಗಳಲ್ಲಿ ಮಕ್ಕಳ ಕಳ್ಳತನವಾಗುತ್ತಿವೆ, ಈ ಕುರಿತು ಗಂಭೀರವಾಗಿ ಪರಿಶೀಲಿಸಿ ಅಂತಹ ಕೃತಗಳಲ್ಲಿ ತೊಡಗಿರುವವರ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಬೇರೆಯವರ ಮಕ್ಕಳನ್ನು ಬಾಡಿಗೆ ಪಡೆದು ದುರುಪಯೋಗಪಡಿಸಿಕೊಳ್ಳುವ ಮೂಲಕ ಅನೇಕರು ಭಿಕ್ಷಾಟನೆಯಲ್ಲಿ ತೊಡಗಿಕೊಂಡಿರುತ್ತಾರೆ. ಇಂತಹ ವ್ಯಕ್ತಿಗಳ ಕುರಿತು ಕೂಲಂಕುಶವಾಗಿ ಪರಿಶೀಲಿಸಿ ಎಂದರು.
ಸಾಂತ್ವನ ಕೇಂದ್ರಗಳ ಮೂಲಕ ವರದಕ್ಷಿಣೆ ಕಿರುಕುಳ ಮತ್ತು ಕೌಟುಂಬಿಕ ಕಲಹಗಳ ಕುರಿತು ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಜರುಗುವ ಸಂತೆಗಳು, ಜಾತ್ರೆ, ಸಭೆ-ಸಮಾರಂಭಗಳಂತಹ ಜನಸಂದಣಿ ಸ್ಥಳಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಏರ್ಪಡಿಸಬೇಕು. ವರದಕ್ಷಿಣೆ ಕಿರುಕುಳ ಮತ್ತು ಕೌಟುಂಬಿಕ ಕಲಹಗಳ ಪ್ರಕರಣಗಳಲ್ಲಿ ಪೊಲೀಸ್ ಇಲಾಖೆ ಎಫ್.ಐ.ಆರ್ ದಾಖಲಿಸುವ ಮುನ್ನ ಸಾಂತ್ವನ ಕೇಂದ್ರಗಳ ಮುಖಾಂತರ ಸಂಧಾನಕ್ಕೆ ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ವಾಸಂತಿ ಉಪ್ಪಾರ್ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 5,166 ಸ್ತ್ರೀಶಕ್ತಿ ಸ್ವ-ಸಹಾಯ ಗುಂಪುಗಳಿವೆ, ಅದರಲ್ಲಿ 1272 ಪರಿಶಿಷ್ಟ ಜಾತಿ ಮತ್ತು 725 ಪರಿಶಿಷ್ಟ ಪಂಗಡ, 194 ಅಲ್ಪಸಂಖ್ಯಾತ ಹಾಗೂ 2975 ಇತರೆ ವರ್ಗಗಳಿಗೆ ಸೇರಿದ ಸ್ತ್ರೀಶಕ್ತಿ ಸ್ವ-ಸಹಾಯ ಗುಂಪುಗಳಿವೆ. ಅನೇಕ ಸ್ವ-ಸಹಾಯ ಗುಂಪುಗಳ ಸದಸ್ಯರಿಗೆ ಆದಾಯ ಉತ್ಪನ್ನ ಚಟುವಟಿಕೆಗಳ ಕುರಿತು ತರಬೇತಿ ನೀಡಬೇಕಾಗಿದೆ. ಆದರೆ ಕೆಲವೊಂದು ಗುಂಪುಗಳ ಸದಸ್ಯರು ವೈಯಕ್ತಿಕವಾಗಿ ತರಬೇತಿ ಪಡೆಯಲು ಆಸಕ್ತಿ ಹೊಂದಿರುತ್ತಾರೆ, ತಮ್ಮ ಗುಂಪುಗಳ ಮೂಲಕ ತರಬೇತಿ ಪಡೆಯಲು ಹಿಂದೆಟು ಹಾಕುತ್ತಾರೆ ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರವೀಣ್ ನಾಯಕ್ ಮಾತನಾಡಿ, ವರದಕ್ಷಿಣೆ ಕಿರುಕುಳ ಮತ್ತು ಕೌಟುಂಬಿಕ ಕಲಹಗಳ ಪ್ರಕರಣಗಳ ಸಂಖ್ಯೆ ಸಾಂತ್ವನ ಕೇಂದ್ರದ ವರದಿಯಲ್ಲಿ ಕಡಿಮೆ ಇದೆ, ಆದರೆ ನ್ಯಾಯಲಯದಲ್ಲಿ ಈ ಕುರಿತು ಹೆಚ್ಚಿನ ಪ್ರಕರಣಗಳು ದಾಖಲಾಗುತ್ತಿವೆ. ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿರುವ ಸಾಂತ್ವನ ಕೇಂದ್ರಗಳು ಆಯಾ ತಾಲ್ಲೂಕಿನಲ್ಲಿರುವ ತಾಲ್ಲೂಕು ಕಾನೂನು ಸೇವೆಗಳ ಪ್ರಾಧಿಕಾರದ ವಕೀಲರನ್ನು ವರದಕ್ಷಿಣೆ ಕಿರುಕುಳ ಮತ್ತು ಕೌಟುಂಬಿಕ ಕಲಹಗಳ ಸಮಸ್ಯೆಗಳ ಪರಿಹರಿಸಲು ಸಲಹೆ ಮತ್ತು ಸಹಕಾರಕ್ಕಾಗಿ ಸಂಪರ್ಕಿಸಬಹುದಾಗಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಾಗರಾಜ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಕೌಸರ್ ರೇಷ್ಮಾ, ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ.ಚಂದ್ರಶೇಖರ್ ಸುಂಕದ್ ಸೇರಿದಂತೆ ವಿವಿಧ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.