ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ (Actor Darshan) ಜೈಲು ಸೇರಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಕೇಸ್‌ನಲ್ಲಿ ದರ್ಶನ್ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಹಿಂದೆ ದರ್ಶನ್ ಅವರನ್ನ ಭೇಟಿಯಾಗಲು ಪರಪ್ಪನ ಅಗ್ರಹಾರ ಜೈಲಿಗೆ ವಿನೋದ್ ರಾಜ್ ಆಗಮಿಸಿದ್ದರು. ದರ್ಶನ್ ಅವರನ್ನ ಕಂಡು ವಿನೋದ್ ರಾಜ್ ಭಾವುಕರಾಗಿದ್ದರು. ದರ್ಶನ್ ಅವರನ್ನ ಮೀಟ್ ಮಾಡಿದ್ಮೇಲೆ ಕಣ್ಣೀರು ಹಾಕುತ್ತಲೇ ಮಾಧ್ಯಮಗಳೊಂದಿಗೆ ಮಾತನಾಡಿದ್ದರು. ಇಂದು (ಜುಲೈ 26) ಚಿತ್ರದುರ್ಗಕ್ಕೆ ಹೋಗಿ ಸಂತ್ರಸ್ತ ರೇಣುಕಾ ಸ್ವಾಮಿ ಕುಟುಂಬವನ್ನು ಭೇಟಿ ಮಾಡಿ ಸಾಂತ್ವಾನ ಹೇಳುವ ಜತೆಗೆ 1 ಲಕ್ಷ ರೂಪಾಯಿ ಹಣ ಸಹಾಯವನ್ನು ಸಹ ಮಾಡಿದ್ದಾರೆ.
ಬೆಳಗ್ಗೆಯೇ ಚಿತ್ರದುರ್ಗಕ್ಕೆ ತೆರಳಿದ ನಟ ವಿನೋದ್ ರಾಜ್ ಮಾತನಾಡಿ, ‘ಮನೆಗೆ ಆಧಾರ ಸ್ತಂಭವಾದ ಮಗನನ್ನು ಕಳೆದುಕೊಂಡಿದ್ದಾರೆ. ಕುಟುಂಬ ಪರಿತಪಿಸುತ್ತಿರುವ ಸ್ಥಿತಿ ಕಂಡು ಕರಳುಕಿತ್ತು ಬರುತ್ತಿದೆ. ಜೀವನದಲ್ಲಿ ಮನುಷ್ಯ ಹೇಗೆ ಬಾಳಬೇಕು, ಹೇಗೆ ನಡೆದುಕೊಳ್ಳಬೇಕು, ಯಾವ ದಿಕ್ಕಿನಲ್ಲಿ ಮಾನವೀಯತೆ, ಮನುಷತ್ವ ಸಾಗುತ್ತಿದೆ, ಮನುಷ್ಯತ್ವ ಇದೆಯಾ ಎನ್ನುವುದು ನಮ್ಮನ್ನೇ ಮುಟ್ಟಿಕೊಂಡು ನೋಡುವಂತಹ ಕಾಲ ಬಂದಿದೆ. ಜೀವನ ಇಡೀ ಸಂಪದಾನೆ, ಹೆಸರು ಮಾಡುವುದು ಅಲ್ಲವೇ ಅಲ್ಲ. ಜೀವನ ಇಡಿ ಜೀವಗಳ ಬಗ್ಗೆ ಕಾಳಜಿ ತೆಗೆದುಕೊಂಡು ಬದುಕಬೇಕು. ಪ್ರತಿಯೊಬ್ಬರ ಜೀವನದಲ್ಲೂ ಜೀವಗಳಿವೆ. ಜೀವರಾಶಿಗಳನ್ನ ಭಗವಂತ ತಂದೆ ತಾಯಿ ರೂಪದಲ್ಲಿ ಸೃಷ್ಟಿ ಮಾಡಿರುತ್ತಾನೆ. ಅವರೂ ಕೂಡ ಚೆನ್ನಾಗಿ ಇರಬೇಕು ಎಂದು ಬೆಳೆಸುತ್ತಾರೆ. ಎಲ್ಲೋ ಒಂದು ಅತಾಚುರ್ಯ, ಕೆಟ್ಟದ್ದು ನಡೆಯುತ್ತೆ. ಕೆಟ್ಟದ್ದು ಜಾಸ್ತಿ ಆದಾಗ ಇಂತಹ ಪರಿಸ್ಥಿತಿ ಬರುತ್ತದೆ. ಆದರೆ ಇದು ಹೆಚ್ಚಾಗಬಾರದು. ಸಮಾಜದಲ್ಲಿ ಉನ್ನತವಾದ ಸ್ಥಾನ ಎತ್ತರದ ಮಟ್ಟದಲ್ಲಿರುವವರು ವಿವೇಕ ಮರೆಯಬಾರದು, ಅಚಾತುರ್ಯ ನಡೆಯುತ್ತವೆ, ಮುಂದಿನ ತಲೆಮಾರುಗಳು ಹೀಗೆ ಆಗದಂತೆ ಎಚ್ಚರವಹಿಸಬೇಕು, ಮಾಧ್ಯಮ ತಿದ್ದಿಬುದ್ದಿ ಹೇಳಿದಂತೆ ಅನುಸರಿಸಿಕೊಂಡು ಸಾಗಬೇಕು’ ಎಂದು ವಿನೋದ್ ರಾಜ್ಕುಮಾರ್ ಹೇಳಿದರು.




