ಮುಂಡಗೋಡ: ಮೂತ್ರ ವಿಸರ್ಜನೆಗೆ ತೆರಳಿದ್ದ ಬಾಲಕಿಗೆ ಹಾವು ಕಚ್ಚಿ ಸಾವನ್ನಪ್ಪಿದ ಧಾರುಣ ಘಟನೆ ಉತ್ತರಕನ್ನಡ ಜಿಲ್ಲೆಯ ಮುಂಡಗೋಡದಲ್ಲಿ ನಡೆದಿದೆ. ಮಯೂರಿ ಸುರೇಶ ಕುಂಬ್ಳೆಪ್ಪನವರ್(4) ಮೃತ ದುರ್ದೈವಿ ಬಾಲಕಿಯಾಗಿದ್ದಾಳೆ.
ಬಾಲಕಿ ಮಯೂರಿ ಪಟ್ಟಣದ ಮಾರಿಕಾಂಬಾ ನಗರದಲ್ಲಿರುವ ಅಂಗನವಾಡಿಗೆ ತೆರಳಿದ್ದಳು. ಈ ವೇಳೆ ಮೂತ್ರ ವಿಸರ್ಜನೆಗೆಂದು ಅಂಗನವಾಡಿಯ ಹಿಂದಿನ ಅರಣ್ಯ ಪ್ರದೇಶದ ಬಳಿ ತೆರಳಿದ್ದು ಈ ವೇಳೆ ಆಕಸ್ಮಿಕವಾಗಿ ಹಾವು ಕಚ್ಚಿದೆ. ಬಾಲಕಿ ಚೀರಾಟದ ಸದ್ದು ಕೇಳಿ ಅಂಗನವಾಡಿ ಸಿಬ್ಬಂದಿ ದೌಡಾಯಿಸಿದ್ದು, ಬಾಲಕಿಯನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಮುಂಡಗೋಡ ತಾಲ್ಲೂಕಾಸ್ಪತ್ರೆಯಲ್ಲಿ ಬಾಲಕಿಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಆಸ್ಪತ್ರೆಗೆ ಕರೆದೊಯ್ದಿದ್ದು, ಈ ವೇಳೆ ಆಸ್ಪತ್ರೆ ತಲುಪುವ ವೇಳೆಗಾಗಲೇ ಬಾಲಕಿ ಕೊನೆಯುಸಿರೆಳೆದಿದ್ದಾಗಿ ಆಸ್ಪತ್ರೆ ವೈದ್ಯರು ಘೋಷಿಸಿದ್ದಾರೆ.
ಬಾಲಕಿ ಸಾವಿನಿಂದಾಗಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದ್ದು, ಬಾಲಕಿ ಒಬ್ಬಳನ್ನೇ ಮೂತ್ರವಿಸರ್ಜನೆಗೆ ಕಳುಹಿಸಿದ ಸಿಬ್ಬಂದಿ ವಿರುದ್ಧ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ.