ದಾವಣಗೆರೆ: ಹೆದ್ದಾರಿಗಳಲ್ಲಿ ಪಥ ಶಿಸ್ತು (Traffic rules on highways) ಉಲ್ಲಂಘಿಸುವ ವಾಹನ ಸವಾರರಿಗೆ (Driver) ₹ 500 ದಂಡ ವಿಧಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ (C.B. Rishyanth) ಹೇಳಿದ್ದಾರೆ.
ಹೌದು, ನಗರದಲ್ಲಿ ಹಮ್ಮಿಕೊಂಡಿದ್ದ ಸಂಚಾರ ನಿಯಮಗಳ ಜಾಗೃತಿಗಾಗಿ, ಬೈಕ್ ಜಾಥಾಗೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಅವರು, ‘ಹೆದ್ದಾರಿಯಲ್ಲಿ ಕಾರ್ ಸೇರಿದಂತೆ ನಾಲ್ಕು ಚಕ್ರದ ವಾಹನಗಳಿಗೆ ಮೀಸಲಾದ ಪಥದಲ್ಲಿ ಭಾರಿ ವಾಹನಗಳು ಸಂಚರಿಸುತ್ತಿದ್ದು, ಇದರಿಂದ ಕಾರು ಮತ್ತಿತರ ವಾಹನಗಳ ಸವಾರರು ವೇಗದಲ್ಲಿ ಬೇರೆ ಬೇರೆ ಪಥಗಳಲ್ಲಿ ನುಸುಳಿಕೊಂಡು ಹೋಗುವಾಗ ಅಪಘಾತಗಳು ಸಂಭವಿಸಿ ಸಾವು– ನೋವುಗಳು ಉಂಟಾಗುತ್ತಿದ್ದು, ಅಪಘಾತಗಳನ್ನು ತಗ್ಗಿಸಲು ಪಥ ಶಿಸ್ತು ಕಾಪಾಡುವುದು ಅಗತ್ಯವಾಗಿದೆ ಎಂದು ಹೇಳಿದರು.
ಇನ್ನು, ಹೆದ್ದಾರಿಯಲ್ಲಿ ನಾಲ್ಕು ಚಕ್ರದ ವಾಹನಗಳು ಫಸ್ಟ್ ಲೇನ್, ಒಳ ಪಥ, (ಇನ್ನರ್ ಲೇನ್) ಹಾಗೂ ಭಾರಿ ವಾಹನಗಳಾದ ಲಾರಿ, ಬಸ್, ಟ್ರಕ್, ಟ್ಯಾಂಕರ್‌ಗಳು ಸೆಕೆಂಡ್ ಲೇನ್, ಹೊರ ಪಥ, (ಔಟರ್ ಲೇನ್)ದಲ್ಲಿ ಸಂಚರಿಸಬೇಕು. ಒಂದು ವೇಳೆ ಈ ಶಿಸ್ತು ಉಲ್ಲಂಘಿಸಿದರೆ ₹ 500 ದಂಡ ವಿಧಿಸಲಾಗುವುದು. .ಈ ಸಂಬಂಧ ರಾಷ್ಟ್ರೀಯ ಹೆದ್ದಾರಿ– 48ರಲ್ಲಿ ಪೈಲೆಟ್ ಪ್ರಾಜೆಕ್ಟ್ ಆಗಿ ದಾವಣಗೆರೆ ಜಿಲ್ಲೆಯನ್ನು ಆಯ್ಕೆ ಮಾಡಲಾಗಿದ್ದು, ಸೋಮವಾರ ಸಂಜೆಯಿಂದಲೇ ಶಿಸ್ತು ಉಲ್ಲಂಘನೆಗೆ ದಂಡ ವಿಧಿಸುವ ಕಾರ್ಯ ಆರಂಭವಾಗಲಿದೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಹೇಳಿದ್ದಾರೆ.
ನಂಬರ್ ಪ್ಲೇಟ್ ಗುರುತಿಸುವ 9 ಸ್ವಯಂ ಚಾಲಿತ ಕ್ಯಾಮೆರಾ :
ಅಷ್ಟೇ ಅಲ್ಲ, ದಾವಣಗೆರೆ, ಹಾವೇರಿ ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ನಂಬರ್ ಪ್ಲೇಟ್ ಗುರುತಿಸುವ 9 ಸ್ವಯಂ ಚಾಲಿತ ಕ್ಯಾಮೆರಾ ಆಟೊಮ್ಯಾಟಿಕ್ ನಂಬರ್ ಪ್ಲೇಟ್ ರೆಕಗ್ನೈಷನ್ ಕ್ಯಾಮೆರಾ (Automatic number plate recognition camera) ಗಳನ್ನು ಅಳವಡಿಸಲಾಗಿದ್ದು, ಒಂದು ವೇಳೆ ಬೃಹತ್ ವಾಹನಗಳು ಪಥ ಶಿಸ್ತು ಉಲ್ಲಂಘಿಸಿದರೆ ಆ ವಾಹನಗಳ ನಂಬರ್, ಸ್ಥಳ, ಸಮಯ, ಜಿಪಿಎಸ್ ಲೊಕೇಷನ್ ಸಮೇತ ಚಿತ್ರಗಳು ಟೋಲ್‌ಗೇಟ್‌ಗಳಲ್ಲಿ ಇರುವ ಮಲ್ಪಿ ಫಂಕ್ಷನಲ್ ಡಿವೈಸ್‌ಗೆ (Multi functional device) ರವಾನೆಯಾಗುತ್ತವೆ.
ಟೋಲ್ ಗೇಟ್‌ಗಳಲ್ಲಿ ವಾಹನಗಳು ನಿಂತಾಗ ಅಲ್ಲಿ ದಂಡ ವಿಧಿಸಲಾಗುವುದು. ಒಂದು ವೇಳೆ ಆ ಟೋಲ್ ಗೇಟ್‌ನಲ್ಲಿ ತಪ್ಪಿಸಿಕೊಂಡರೆ ಮತ್ತೊಂದು ಟೋಲ್‌ಗೇಟ್‌ನಲ್ಲಿ ದಂಡ ವಿಧಿಸುವುದು ಖಚಿತ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಮಾಹಿತಿ ನೀಡಿದರು.