ಬೆಂಗಳೂರು: ಸಿಬಿಐ ಮತ್ತು ಟ್ರಾಯ್ ಅಧಿಕಾರಿಗಳ ಸೋಗಿನಲ್ಲಿ ನಿವೃತ್ತ ಮಹಿಳಾ ಸರ್ಕಾರಿ ಅಧಿಕಾರಿಯನ್ನು ಕರೆದು, ಅವರ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಲಾಗಿದೆ ಎಂದು ಬೆದರಿಕೆ ಹಾಕಿದ್ದ ಸೈಬರ್ ವಂಚಕರು 42.85 ಲಕ್ಷ ರೂ. ಹಣ ವಸೂಲಿ ಮಾಡಿದ್ದಾರೆ.
ಹೂಡಿ ಸರ್ಕಲ್ ನಿವಾಸಿ K.N ಸಾವಿತ್ರಿ ಅವರ ದೂರಿನ ಮೇರೆಗೆ ವೈಟ್ಫೀಲ್ಡ್ ವಿಭಾಗದ ಸೈಬರ್ ಕ್ರೈಮ್ (ಸೆನ್) ಠಾಣೆಯ ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಕೆಲವು ದಿನಗಳ ಹಿಂದೆ, ದೂರುದಾರರಾದ ಸಾವಿತ್ರಿಗೆ ಟ್ರಾಯ್ ಅಧಿಕಾರಿಯ ಹೆಸರಿನಲ್ಲಿ ಕರೆ ಮಾಡಿದ ವ್ಯಕ್ತಿ, ನಿಮ್ಮ ಹೆಸರಿನಲ್ಲಿ ಅನೇಕ ಜನರಿಗೆ ಅಕ್ರಮ ಮಾರ್ಕೆಟಿಂಗ್ ಮತ್ತು ನಿಂದನೀಯ ಸಂದೇಶಗಳನ್ನು ಕಳುಹಿಸಲಾಗಿದೆ ಎಂದು ಹೇಳಿದ್ದರು. ಈ ಬಗ್ಗೆ ದೂರು ದಾಖಲಾಗಿದ್ದು, ಎಫ್ ಐಆರ್ ದಾಖಲಾಗಿದೆ ಎಂದಿದ್ದರು.
ಅಲ್ಲದೇ ಈ ಪ್ರಕರಣದಲ್ಲಿ ಸಹಾಯ ಮಾಡಲು ಮುಂಬೈ ಪೊಲೀಸರನ್ನು ಸಂಪರ್ಕಿಸುವುದಾಗಿ ಹೇಳಿ ಆತ ಅಪರಿಚಿತ ವ್ಯಕ್ತಿಗಳಿಗೆ ಮೊಬೈಲ್ ಕರೆಗಳನ್ನು ಮಾಡಿದ್ದ. ನಂತರ, ಸಿಬಿಐ ಅಧಿಕಾರಿಗಳಂತೆ ನಟಿಸಿದ ಅಪರಿಚಿತರು, ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಾಗಿರುವುದರಿಂದ ಬ್ಯಾಂಕ್ ಖಾತೆಯನ್ನು ಪರಿಶೀಲಿಸಬೇಕು ಎಂದು ಹೇಳಿದರು. ನಿಮ್ಮ ಖಾತೆಯಲ್ಲಿರುವ ಹಣವನ್ನು ನಾವು ಒದಗಿಸುವ ಖಾತೆಗೆ ವರ್ಗಾಯಿಸಿ ಎಂದಿದ್ದಾರೆ.
ಇದರಿಂದ ಭಯಗೊಂಡ ಸಾವಿತ್ರಿ, ಆರೋಪಿಗಳು ವಿವಿಧ ಹಂತಗಳಲ್ಲಿ ನೀಡಿದ ಖಾತೆಗಳಿಗೆ 42.85 ಲಕ್ಷ ರೂಪಾಯಿಗಳನ್ನು ವರ್ಗಾಯಿಸಿದ್ದಾರೆ. ನಂತರ ವಂಚಕರು ಕರೆಯನ್ನು ಕಡಿತಗೊಳಿಸಿದರು. ಇದರಿಂದ ಎಚ್ಚೆತ್ತುಕೊಂಡ ಸಾವಿತ್ರಿ ತಕ್ಷಣ ಸೇನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು.