ಬಳ್ಳಾರಿ: ಜಿಲ್ಲೆಯಲ್ಲಿ ಇಂದಿನಿಂದ 172 ಗ್ರಾಮ ಒನ್ ಕೇಂದ್ರಗಳು ಕಾರ್ಯಾರಂಭ ಮಾಡಲಿವೆ ಎಂದು ಸಚಿವ ಬಿ.ಶ್ರೀರಾಮುಲು ಅವರು ತಿಳಿಸಿದ್ದು, ಇಂದು ಮುಖ್ಯಮಂತ್ರಿಗಳು ಬಳ್ಳಾರಿ ಸೇರಿದಂತೆ 12 ಜಿಲ್ಲೆಗಳಲ್ಲಿ ಗ್ರಾಮ ಒನ್ ಸೇವೆಗಳಿಗೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.
73ನೇ ಗಣರಾಜ್ಯೋತ್ಸವದ ಅಂಗವಾಗಿ ಬಳ್ಳಾರಿ ಜಿಲ್ಲಾಡಳಿತದ ವತಿಯಿಂದ ನಗರದ ಜಿಲ್ಲಾಕ್ರೀಡಾಂಗಣದಲ್ಲಿ ಬುಧವಾರ ಧ್ವಜಾರೋಹಣ ನೆರವೇರಿಸಿ ವಿವಿಧ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿ ಮಾತನಾಡಿದ ಸಚಿವ ಬಿ.ಶ್ರೀರಾಮುಲು ಅವರು, ಕಂದಾಯ, ಆರೋಗ್ಯ, ಆಹಾರ ಸೇರಿದಂತೆ ವಿವಿಧ ಇಲಾಖೆಗಳ ಸುಮಾರು 100 ಸರ್ಕಾರಿ ಸೇವೆಗಳು ಜನರ ಮನೆ ಬಾಗಿಲಿಗೆ ಬರಲಿದ್ದು, ಈ ಮೂಲಕ ಸರ್ಕಾರವೇ ನಿಮ್ಮ ಮನೆ ಬಾಗಿಲಿಗೆ ಬಂದಿದೆ. ಇದೆ ನಮ್ಮ ಸಂವಿಧಾನದ ಶಕ್ತಿ ಎಂದು ಹೇಳಿದರು.
ಜನರು ಸರ್ಕಾರದ ಬಾಗಿಲಿಗೆ ಹೋಗಬಾರದು, ಸರ್ಕಾರವೇ ಜನರ ಬಾಗಿಲಿಗೆ ಬರಬೇಕು. ಅದೇ ನಿಜವಾದ ಜನತಂತ್ರ. ಅದಕ್ಕೆ ಹೇಳಿದೆ ಜನರ ಬಾಗಿಲಿಗೆ ಸರ್ಕಾರವನ್ನ ಕೊಂಡೊಯ್ಯುವ ದಿನವಾಗಿದ್ದು, ಅದನ್ನು ನಮ್ಮ ಸರ್ಕಾರ ಸಾಕಾರಗೊಳಿಸಿದೆ ಎಂದು ಸಚಿವ ಬಿ.ಶ್ರೀರಾಮುಲು ಅವರು ಹೇಳಿದರು.




