ವಿಜಯನಗರ ಪಿಡಿ ಖಾತೆಯಲ್ಲಿ 11.48ಕೋಟಿ ರೂ ಲಭ್ಯ; ಪ್ರಕೃತಿ ವಿಕೋಪಗಳಿಗೆ ಜಿಲ್ಲಾಡಳಿತದಿಂದ ತಕ್ಷಣ ಸ್ಪಂದನೆ

ಹೊಸಪೇಟೆ(ವಿಜಯನಗರ): ವಿಜಯನಗರ ಜಿಲ್ಲೆಯಲ್ಲಿ 2022-23ನೇ ಸಾಲಿನಲ್ಲಿ ಸುರಿದ ಮಳೆಯಿಂದ ಮೊದಲ ಮತ್ತು ಎರಡನೇ ಹಂತದಲ್ಲಿ 354.57 ಎಕರೆ ಬೆಳೆಹಾನಿಯಾಗಿದ್ದು,ಇದುವರೆಗೆ 1.38ಕೋಟಿ ರೂ.ಪರಿಹಾರ ಪಾವತಿಸಲಾಗಿದೆ ಎಂದು ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವರು ಹಾಗೂ ಜಿಲ್ಲಾ…

Sashikala Jolle vijayaprabha news

ಹೊಸಪೇಟೆ(ವಿಜಯನಗರ): ವಿಜಯನಗರ ಜಿಲ್ಲೆಯಲ್ಲಿ 2022-23ನೇ ಸಾಲಿನಲ್ಲಿ ಸುರಿದ ಮಳೆಯಿಂದ ಮೊದಲ ಮತ್ತು ಎರಡನೇ ಹಂತದಲ್ಲಿ 354.57 ಎಕರೆ ಬೆಳೆಹಾನಿಯಾಗಿದ್ದು,ಇದುವರೆಗೆ 1.38ಕೋಟಿ ರೂ.ಪರಿಹಾರ ಪಾವತಿಸಲಾಗಿದೆ ಎಂದು ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶಶಿಕಲಾ ಜೊಲ್ಲೆ ಅವರು ಹೇಳಿದರು.

ಇತ್ತೀಚೆಗೆ ಸುರಿದ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳು ಹಾಗೂ ಬೆಳೆಹಾನಿ ಪರಿಶೀಲನೆ ನಡೆಸಿದ ನಂತರಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಆಗಸ್ಟ್ 2ರಂದು ಪ್ರಕೃತಿ ವಿಕೋಪದಿಂದ ಓರ್ವ ಸಾವನ್ನಪ್ಪಿದ್ದು, ಸದರಿ ವ್ಯಕ್ತಿಯ ವಾರಸುದಾರರಿಗೆ 5 ಲಕ್ಷ ರೂಪಾಯಿಗಳ ಪರಿಹಾರ ನೀಡಲಾಗಿದೆ ಎಂದು ವಿವರಿಸಿದ ಅವರು ವಿಜಯನಗರ ಜಿಲ್ಲಾಡಳಿತವು ಪ್ರಕೃತಿ ವಿಕೋಪಗಳಿಗೆ ತಕ್ಷಣ ಸ್ಪಂದಿಸುವ ಮತ್ತು ಆ ರೀತಿಯಾಗದಂತೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಸದ್ಯ ವಿಜಯನಗರ ಜಿಲ್ಲಾಡಳಿತದ ಪಿ.ಡಿ ಖಾತೆಯಲ್ಲಿ 11.48 ಕೋಟಿ ರೂಪಾಯಿಗಳಷ್ಟು ಹಣ ಲಭ್ಯವಿದ್ದು, ಹಣದ ಸಮಸ್ಯೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

2022ರ ಜೂ.1ರಿಂದ ಆ.31ರವರೆಗೆ 2153.34 ಹೆಕ್ಟೇರ್ ಭೂಮಿಯಲ್ಲಿ ಬೆಳೆ ಹಾನಿಯಾಗಿದ್ದು, 3988 ರೈತರುಗಳು ಇದರಿಂದ ತೊಂದರೆಗೀಡಾಗಿದ್ದಾರೆ. 2.98 ಕೋಟಿರೂ.ಪರಿಹಾರದ ಬೇಡಿಕೆ ಅವಶ್ಯವಿದೆ ಎಂದರು.

Vijayaprabha Mobile App free

ವಾಡಿಕೆಗಿಂತ ಶೇ.185.9ರಷ್ಟು ಹೆಚ್ಚು ಮಳೆ:

ವಿಜಯನಗರಜಿಲ್ಲೆಯಲ್ಲಿ ಆಗಸ್ಟ್ ತಿಂಗಳಲ್ಲಿ ವಾಡಿಕೆಗಿಂತ ಶೇ.185.9ರಷ್ಟು ಹೆಚ್ಚು ಮಳೆಯಾಗಿದೆ. ಈ ಹಿನ್ನ್ನೆಲೆಯಲ್ಲಿ ವಿಜಯನಗರಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ಆಗಸ್ಟ್ 25 ರಿಂದ 31 ರ ವರೆಗೆ ಪ್ರಕೃತಿ ವಿಕೋಪದಿಂದ ಹೆಚ್ಚಿನ ಹಾನಿಯಾಗಿದೆ. ಆರು ದಿನಗಳಲ್ಲಿ ಸುರಿದ ಮಳೆಯಿಂದಾಗಿ 197 ಮನೆಗಳಿಗೆ ಹಾನಿಯಾಗಿದೆ . ಹರಪನಹಳ್ಳಿಯ ಸಿಂಗ್ರಿಹಳ್ಳಿಯಲ್ಲಿ ಕೆರೆಯ ಕೋಡಿ ಒಡೆದ ಪರಿಣಾಮ ಗ್ರಾಮಕ್ಕೆ ನೀರು ನುಗ್ಗಿ 36 ಮನೆಗಳಿಗೆ ಹಾನಿಯಾಗಿದ್ದು, ನನ್ನ ನಿರ್ದೇಶನದ ಅನುಸಾರ ಜಿಲ್ಲಾಡಳಿತವು ಅಲ್ಲಿ ಕಾಳಜಿ ಕೇಂದ್ರ ತೆರೆದಿದೆ. ಹಾನಿಗೊಳಗಾದ 36 ಮನೆಗಳಿಗೆ ತಲಾ 10 ಸಾವಿರಗಳಂತೆ 3.6ಲಕ್ಷ ರೂ. ಪರಿಹಾರ ವಿತರಣೆ ಮಾಡಲಾಗಿದೆ ಎಂದರು.

ಹೊಸಪೇಟೆ ನಗರ ಇಂದಿರಾ ನಗರದ ವಾರ್ಡ್ 15ರ ವ್ಯಾಪ್ತಿಯ 54 ಮನೆಗಳಿಗೂ ಇತ್ತೀಚೆಗೆ ಸುರಿದ ಮಳೆಯಿಂದ ನೀರು ನುಗ್ಗಿ ಹಾನಿಗೊಳಗಾದ ಹಿನ್ನೆಲೆ ಒಂದು ಮನೆಗೆ 10 ಸಾವಿರದಂತೆ ಒಟ್ಟು 5.40ಲಕ್ಷ ರೂಪಾಯಿಗಳ ಪರಿಹಾರವನ್ನು ವಿತರಿಸಲಾಗಿದೆ ಎಂದು ವಿವರಿಸಿದ ಅವರು ಹೊಸಪೇಟೆಯ ಇಂದಿರಾನಗರದ ಹಲವಾರು ಪ್ರದೇಶಗಳಿಗೆ ಭೇಟಿ ನೀಡಿದ್ದು ಪರಿಸ್ಥಿತಿ ಪರಿಶೀಲಿಸಿದ್ದೇನೆ. ಜಿಲ್ಲೆಯ ಅತಿದೊಡ್ಡ ಕೆರೆಯಾಗಿರುವ ಡಣನಾಯಕನಕೆರೆ ಗ್ರಾಮದ ಕೆರೆಯು 3 ವರ್ಷಗಳ ನಂತರ ತುಂಬಿ ಕೋಡಿ ಒಡೆದ ಪರಿಣಾಮ ಬಹಳಷ್ಟು ಹಾನಿಯಾಗಿದ್ದನ್ನು ಪರಿಶೀಲಿಸಿದ್ದೇನೆ ಎಂದರು.

ಮಲಿಯಮ್ಮನಹಳ್ಳಿ ಗ್ರಾಮದಿಂದ ರಾಷ್ಟ್ರೀಯ ಹೆದ್ದಾರಿಗೆ ಸೇರುವ ಜಿಲ್ಲಾರಸ್ತೆ ಹಾಳಾಗಿರುವ ಬಗ್ಗೆಯೂ ಪಲಿಶೀಲನೆ ನಡೆಸಿದ್ದೇನೆ. ಅಗತ್ಯ ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆಎಂದರು.

ವಿಜಯನಗರ ಜಿಲ್ಲಾ ಕೇಂದ್ರವಾಗಿರುವ ಹೊಸಪೇಟೆಯಲ್ಲಿ ಭೂಒತ್ತುವರಿ ಪ್ರಕರಣಗಳು ಕೇಳಿಬರುತ್ತಿದ್ದು, ಅವುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮುರುಘಾ ಶರಣರ ಬಗ್ಗೆ ಆರೋಪಗಳು ಬಂದಿರುವಂತಹದ್ದು ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ಈಗಾಗಲೇ ತನಿಖೆ ನಡೆಯುತ್ತಿದೆ .ತನಿಖೆಯ ನಂತರ ಸತ್ಯ ತಿಳಿಯಲಿದೆ. ಕಾನೂನಿನ ಪ್ರಕಾರ ತಗೆದುಕೊಳ್ಳಬೇಕಾದಂತಹ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಸಚಿವ ಆನಂದಸಿಂಗ್, ಸಂಸದ ವೈ.ದೇವೇಂದ್ರಪ್ಪ, ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್,ಎಸ್ಪಿ ಡಾ.ಅರುಣ್ ಕೆ., ಜಿಪಂ ಸಿಇಒ ಹರ್ಷಲ್ ಭೋಯರ್, ನಗರಸಭೆ ಅಧ್ಯಕ್ಷೆ ಸುಂಕಮ್ಮ ಸೇರಿದಂತೆ ಇನ್ನೀತರರು ಇದ್ದರು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.