ಬೆಂಗಳೂರು: ಹಾಲ್ಮಾರ್ಕ್ ಚಿನ್ನಾಭರಣವೆಂದು ನಂಬಿಸಿ ನಕಲಿ ಚಿನ್ನಾಭರಣ ಅಡಮಾನವಿಟ್ಟು ಪಾನ್ ಬ್ರೋಕರ್ ಅಂಗಡಿಯ ಮಾಲೀಕನಿಂದ ₹5.95 ಲಕ್ಷ ಸಾಲ ಪಡೆದು ವಂಚಿಸಿದ್ದು, ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವಸಂತನಗರದ ಕೆಎಸ್‌ಎನ್ ಸ್ಟ್ರೀಟ್‌ನ ಮಹಾವೀರ್ ಬ್ಯಾಂಕರ್ಸ್ ಪಾನ್ ಬ್ರೋಕರ್ ಅಂಗಡಿ ಮಾಲೀಕ ಧನಪತ್ ರಾಜ್ ವಂಚನೆಗೆ ಒಳಗಾದವರು. ಇವರ ಪುತ್ರ ರಾಜೇಶ್ ಪೋರ್ವಲ್ ನೀಡಿದ ದೂರಿನ ಮೇರೆಗೆ ಮೋಹನ್ ಮತ್ತು ಉದಯ್ ಎಂಬುವವರ ವಿರುದ್ಧ ನಂಬಿಕೆ ದ್ರೋಹ, ವಂಚನೆ, ಮೋಸ ವಿವಿಧ ಆರೋಪದಡಿ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಏನಿದು ಪ್ರಕರಣ?:
ದೂರುದಾರನ ತಂದೆ ಧನಪತ್ ರಾಜ್ ಹಲವು ವರ್ಷಗಳಿಂದ ವಸಂತನಗರದ ಕೆಎಸ್‌ಎನ್ ಸ್ಟ್ರೀಟ್‌ನಲ್ಲಿ ಮಹಾವೀರ್ ಬ್ಯಾಂಕರ್ಸ್ ಹೆಸರಿನ ಪಾನ್ ಬ್ರೋಕರ್ ಅಂಗಡಿ ನಡೆಸುತ್ತಿದ್ದಾರೆ. ಆ.15ರಂದು ಮೋಹನ್ ಎಂಬ ವ್ಯಕ್ತಿಯು ಅಂಗಡಿಗೆ ಬಂದು ಚಿನ್ನಾಭರಣ ಅಡಮಾನವಿರಿಸಿ, ಸಾಲ ಪಡೆಯುವ ಬಗ್ಗೆ ಧನಪತ್ ಅವರ ಬಳಿ ವಿಚಾರಿಸಿಕೊಂಡು ಹೋಗಿದ್ದಾನೆ. ಬಳಿಕ ಆ.19ರಂದು ಅಂಗಡಿಗೆ ಬಂದಿರುವ ಮೋಹನ್, 916 ಹಾಲ್ ಮಾರ್ಕ್‌ನ ಚಿನ್ನದ ಸರವನ್ನು ಅಡಮಾನವಿರಿಸಿ ₹65 ಸಾವಿರ ಸಾಲ ಪಡೆದಿದ್ದಾನೆ. ಈ ವೇಳೆ ದಾಖಲೆಯಾಗಿ ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ ನೀಡಿದ್ದಾನೆ. ನಂತರ ಸೆ.9ರಂದು ಮತ್ತೆ ಅಂಗಡಿಗೆ ಬಂದಿರುವ ಮೋಹನ್, 916 ಹಾಲ್ ಮಾರ್ಕ್‌ನ ಚಿನ್ನದ ಸರ ಅಡಮಾನವಿರಿಸಿ, ₹1.80 ಲಕ್ಷ ಸಾಲ ಪಡೆದಿದ್ದಾನೆ. ಬಳಿಕ ಸೆ.12ರಂದು ಉದಯ್ ಎಂಬ ವ್ಯಕ್ತಿ ಅಂಗಡಿಗೆ ಬಂದಿದ್ದು, ಹಾಲ್ ಮಾರ್ಕ್‌ನ ಚಿನ್ನದ ಸರ ಅಡಮಾನವಿರಿಸಿ ₹1.50 ಲಕ್ಷ ಸಾಲ ಪಡೆದು ತೆರಳಿದ್ದಾನೆ. ಅ.9ರಂದು ಮತ್ತೆ ಅಂಗಡಿಗೆ ಬಂದಿರುವ ಮೋಹನ್, ಹಾಲ್ ಮಾರ್ಕ್‌ನ ಚಿನ್ನದ ಸರ, ಚಿನ್ನದ ಬ್ರೇಸ್‌ಲೆಟ್ ಮತ್ತು ಚಿನ್ನದ ಉಂಗುರ ಅಡಮಾನವಿರಿಸಿ ₹2 ಲಕ್ಷ ಸಾಲ ಪಡೆದುಕೊಂಡಿದ್ದಾನೆ.
ಮೊಬೈಲ್ ಬಂದ್ ಆಗಿದ್ದರಿಂದ ಅನುಮಾನ:
ಅ.10ರಂದು ಬ್ಯಾಂಕರ್ಸ್ ಅಂಗಡಿ ಮಾಲೀಕ ಧನಪತ್ ರಾಜ್, ಮೋಹನ್‌ನನ್ನು ಸಂಪರ್ಕಿಸುವ ಸಲುವಾಗಿ ಆತ ನೀಡಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದ್ದಾರೆ. ಈ ವೇಳೆ ಆ ಮೊಬೈಲ್ ಸಂಖ್ಯೆ ಅಸ್ತಿತ್ವದಲ್ಲಿ ಇಲ್ಲ ಎಂಬ ಉತ್ತರ ಬಂದಿದೆ. ಈ ವೇಳೆ ಅನುಮಾನಗೊಂಡ ಧನಪತ್ ರಾಜ್, ಮೋಹನ್ ಮತ್ತು ಉದಯ್ ಅಡಮಾನವಿರಿಸಿದ್ದ ಚಿನ್ನಾಭರಣಗಳನ್ನು ಪರೀಕ್ಷಿಸಿದಾಗ ಅವು ನಕಲಿ ಆಭರಣಗಳು ಹಾಗೂ ಆ ಆಭರಣಗಳಲ್ಲಿ ಹಾಕಲಾಗಿದ್ದ ಹಾಲ್ ಮಾರ್ಕ್ ನಕಲಿ ಎಂಬುದು ಗೊತ್ತಾಗಿದೆ.
ದುಷ್ಕರ್ಮಿಗಳು ತಮ್ಮ ಹೆಸರನ್ನು ಬದಲಿಸಿಕೊಂಡು ನಕಲಿ ದಾಖಲೆ ನೀಡಿ ನಕಲಿ ಚಿನ್ನಾಭರಣ ಅಡಮಾನವಿರಿಸಿ ವಂಚಿಸಿರುವುದು ಅರಿವಿಗೆ ಬಂದಿದೆ.