ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಿಂದ ಸಾಗರ, ಶಿರಸಿಗೆ ತೆರಳಲು ಸರಿಯಾಗಿ ಬಸ್ ವ್ಯವಸ್ಥೆ ಇಲ್ಲದಿರುವುದರಿಂದ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದಾಗಿ ʼಎಕ್ಸ್ʼ ನಲ್ಲಿ ಹರೀಶ್ ಕುಮಾರ್ ಎಂಬವರು ಟ್ವೀಟ್ ಮಾಡಿದ್ದರು. ಇದನ್ನು ಗಮನಿಸಿದ ಮುಖ್ಯಮಂತ್ರಿಗಳ ಕಚೇರಿಯ ಕುಂದುಕೊರತೆ ವಿಭಾಗದ ವಿಶೇಷ ಕರ್ತವ್ಯಾಧಿಕಾರಿಗಳು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಸಿದ್ದಾಪುರದಿಂದ ಸಾಗರ ಮಾರ್ಗದಲ್ಲಿ ಮುಂಜಾನೆಯಿಂದ ಸಾಯಂಕಾಲದವರೆಗೆ ಒಟ್ಟು 55 ಸಾರಿಗೆಗಳು ಕಾರ್ಯಾಚರಣೆಯಲ್ಲಿವೆ. ಇವುಗಳಲ್ಲಿ ಉತ್ತರ ಕನ್ನಡ ವಿಭಾಗದ 38 ಹಾಗೂ ಶಿವಮೊಗ್ಗ ವಿಭಾಗದ 17 ಸಾರಿಗೆಗಳು ಕಾರ್ಯಾಚರಣೆಯಲ್ಲಿವೆ.
ಮುಂಜಾನೆ 6 ಗಂಟೆಯಿಂದ 10 ಗಂಟೆಯವರೆಗೆ ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಉತ್ತರ ಕನ್ನಡ ವಿಭಾಗದ ಒಟ್ಟು 10 ಸಾರಿಗೆಗಳು ಕಾರ್ಯಾಚರಿಸುತ್ತಿವೆ. ಸದರಿ ಸಾರಿಗೆಗಳನ್ನು ನಿಯಮಿತವಾಗಿ ನಿಗದಿತ ವೇಳೆಯಲ್ಲಿ ಕಲ್ಪಿಸುವಂತೆ ಘಟಕ ವ್ಯವಸ್ಥಾಪಕರಿಗೆ ಸೂಚಿಸಲಾಗಿದ್ದು, ಸದರಿ ಮಾರ್ಗದ ಸಾರಿಗೆಗಳ ಕಾರ್ಯಾಚರಣೆ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಲಾಗುವುದು ಎಂದು ವಾ.ಕ.ರ.ಸಾ. ಸಂಸ್ಥೆಯ ಉತ್ತರ ಕನ್ನಡ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.