ಬೆಂಗಳೂರು: ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇಂದು ವಿಧಾನಸೌಧದಲ್ಲಿ ಮಾತನಾಡಿದ್ದು, ನಮ್ಮ ಪಕ್ಷದಿಂದ ನನಗೆ ಶೋಕಾಸ್ ನೋಟಿಸ್ ಬಂದಿದೆ. ನೋಟಿಸ್ ಗೆ 45 ಅಂಶಗಳನ್ನು ಉಲ್ಲೇಖಿಸಿ 11 ಪುಟಗಳ ಉತ್ತರ ನೀಡಿದ್ದೇನೆ ಎಂದು ತಿಳಿಸಿದ್ದಾರೆ.
ಈ ವೇಳೆ, ಉತ್ತರದಲ್ಲಿ ಎಲ್ಲೂ ಕೂಡ ಕ್ಷಮೆ ಕೇಳಿಲ್ಲ, ವಿಷಾದವನ್ನೂ ವ್ಯಕ್ತಪಡಿಸಿಲ್ಲ. ನಾನು ಎಲ್ಲಿಯೂ ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಬಿ.ವೈ.ವಿಜಯೇಂದ್ರ ವಿರುದ್ಧ ಆರೋಪ ಮಾಡಿದ್ದೇನೆ ಎಂದು ಹೇಳಿದರು.
ಭ್ರಷ್ಟಾಚಾರ, ಹಸ್ತಕ್ಷೇಪ, ವರ್ಗಾವಣೆ ದಂಧೆಯಲ್ಲೂ ವಿಜಯೇಂದ್ರ ಬಾಗಿ: ಯತ್ನಾಳ್ ಆರೋಪ
ಇನ್ನು ಯತ್ನಾಳ್ ಅವರು, ಸಿಎಂ ಪುತ್ರ ಬಿ.ವೈ.ವಿಜಯೇಂದ್ರ ಅವರು ಬಿಹಾರ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಲು ಕಾಂಗ್ರೆಸ್ ಹಾಗೂ ಆರ್ ಜೆಡಿ ಪಕ್ಷಗಳಿಗೆ ತಮ್ಮ ಆಪ್ತರ ಮೂಲಕ ಹಣ ಕಳುಹಿಸಿದ್ದಾರೆ. ಪ್ರಧಾನಿ ಮೋದಿ ಅವರ ಶಕ್ತಿ ಕುಂದಿಸಲು ಈ ಕೃತ್ಯ ಎಸಗಿದ್ದಾರೆ. ಇದಲ್ಲದೆ ಭ್ರಷ್ಟಾಚಾರ, ಹಸ್ತಕ್ಷೇಪ, ವರ್ಗಾವಣೆ ದಂಧೆಯಲ್ಲೂ ವಿಜಯೇಂದ್ರ ಭಾಗಿಯಾಗಿದ್ದಾರೆ ಎಂದು ಆರೋಪಿಸಿದರು.