Bantwala Jayaram Acharya passed away: ಯಕ್ಷಗಾನದ ಹಿರಿಯ ಹಾಸ್ಯ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ (65) ಅವರು ನಿಧನರಾಗಿದ್ದಾರೆ.
ಹೌದು, ಪುತ್ತೂರು ಪ್ರವಾಸಿ ಮೇಳದ ತಿರುಗಾಟಕ್ಕೆಂದು ಮೇಳದವರ ಜೊತೆ ನಿನ್ನೆ ಬೆಂಗಳೂರಿಗೆ ಆಗಮಿಸಿದ್ದರು. ಆದರೆ ಇಂದು ಮುಂಜಾನೆ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿತು. ಜೊತೆಯಲ್ಲಿದ್ದ ಕಲಾವಿದರು ತಕ್ಷಣ ಅವರನ್ನು ಆಸ್ಪತ್ರೆಗೆ ಸೇರಿಸಿದರೂ ಅವರನ್ನು ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಬಂಟ್ವಾಳದಲ್ಲಿರುವ ಮನೆಯಲ್ಲಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ತಾವು ಸ್ವಲ್ಪವೂ ನಗದೆ ಪರರನ್ನು ನಗಿಸುತ್ತಿದ್ದ ಬಂಟ್ವಾಳ ಜಯರಾಮ ಆಚಾರ್ಯರು
ಬಂಟ್ವಾಳ ಜಯರಾಮ ಆಚಾರ್ಯರು ಪತ್ನಿ ಶ್ಯಾಮಲಾ, ಇಬ್ಬರು ಮಕ್ಕಳು ಮತ್ತು ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಅಗಲಿದ್ದಾರೆ. ಅವರು ಕಳೆದ 50 ವರ್ಷಗಳಿಂದ ಪಾತ್ರಗಳಿಗೆ ಹಾಸ್ಯರಸದ ಸ್ಪರ್ಶ ನೀಡಿ ಯಕ್ಷ ಪ್ರೇಕ್ಷಕರ ಮನಗೆದ್ದವರು.
ವಿಜಯ, ಮಕರಂದ, ದಾರುಕ, ಬಾಹುಕ, ರಕ್ಕಸದೂತ, ನಾರದ, ಬ್ರಾಹ್ಮಣ, ಬೆಸ್ತ ಹೀಗೆ ಸರ್ವ ಪಾತ್ರಗಳಲ್ಲಿಯೂ ತಾನು ಕಿಂಚಿತ್ತು ನಗದೆ ಪರರನ್ನು ನಗಿಸುವ ಜಾಣೆ ಇವರದ್ದಾಗಿತ್ತು. ಆಚಾರ್ಯರ ನಿಧನಕ್ಕೆ ಯಕ್ಷಗಾನ ದಿಗ್ಗಜರು, ಕಲಾಭಿಮಾನಿಗಳು ಕಂಬನಿ ಮಿಡಿದಿದ್ದಾರೆ.