Mahagauri devi :ಇಂದು ಶರನ್ನವರಾತ್ರಿ ಅಥವಾ ಶಾರದೀಯ ನವರಾತ್ರಿಯ ಎಂಟನೇ ದಿನದಂದು, ದುರ್ಗಾ ದೇವಿಯ 8ನೇ ಶಕ್ತಿಯಾದ ಮಹಾಗೌರಿ ದೇವಿಯನ್ನು ಪೂಜಿಸುವ ಸಂಪ್ರದಾಯವಿದ್ದು, ಮಹಾಗೌರಿ ದೇವಿಯು ಪಾರ್ವತಿ ದೇವಿಯ ರೂಪವಾಗಿದ್ದು, ಈಕೆಯನ್ನು ಗಣೇಶನ ತಾಯಿ ಎಂದೂ ಕರೆಯುತ್ತಾರೆ.
ಮಹಾಗೌರಿಯ ಸ್ವರೂಪ
ಮಹಾಗೌರಿಯ ವಾಹನ ಗೂಳಿಯಾಗಿದ್ದು, ತಾಯಿ ಗೌರಿಗೆ ನಾಲ್ಕು ಕೈಗಳು. ಒಂದು ಕೈಯಲ್ಲಿ ಢಮರು, ಇನ್ನೊಂದು ಕೈಯಲ್ಲಿ ತ್ರಿಶೂಲ ಇರುತ್ತದೆ. ಶ್ವೇತ ವಸ್ತ್ರಧಾರಿಣಿಯಾಗಿರುವ ಗೌರಿ ದೇವಿಯ ಮುಖವು ಶಾಂತ ಸ್ವಭಾವವಾಗಿರುತ್ತದೆ. ತಾಯಿಯ ಈ ರೂಪವನ್ನು ಅನ್ನಪೂರ್ಣ, ಐಶ್ವರ್ಯ, ಪ್ರದಾಯಿನಿ & ಚೈತನ್ಯಮಯ ಎನ್ನಲಾಗುತ್ತದೆ.
ಪೂಜಾ ವಿಧಾನ
- ಸೂರ್ಯೋದಯಕ್ಕೂ ಮುನ್ನ ಎದ್ದು ಸ್ನಾನ ಮಾಡಿ, ಶುಭ್ರ ಬಟ್ಟೆ ಧರಿಸಿ.
- ಮರದ ಪೀಠದ ಮೇಲೆ ಕೆಂಪು ಬಟ್ಟೆ ಹಾಕಿ, ಮಹಾಗೌರಿ ಮೂರ್ತಿಯನ್ನು ಪ್ರತಿಷ್ಠಾಪಿಸಿ.
- ನಂತರ ಕಲಶ ಪೂಜೆ ಮಾಡಿ, ಗಣೇಶ & ತಾಯಿ ಗೌರಿಗೆ ಅಭಿಷೇಕ ಮಾಡಿ.
- ಮಲ್ಲಿಗೆ ಹೂವು, ಅಕ್ಷತೆ, ಕುಂಕುಮ, ವೀಳ್ಯದೆಲೆಯನ್ನು ಅರ್ಪಿಸಿ.
- ತಾಯಿಯ ಮಂತ್ರ ಪಠಿಸುತ್ತಾ ಧೂಪ, ದೀಪ, ಅಗರಬತ್ತಿ ಬೆಳಗಿಸಿ ಸಹ-ಕುಟುಂಬದ ಆರತಿ ಮಾಡಿ.
ದೇವಿ ಆರಾಧನೆ ಮಹತ್ವ
ನವರಾತ್ರಿಯ 8ನೇ ದಿನ ಕೈಗೊಳ್ಳುವ ಪೂಜೆಯು ಭಕ್ತರಿಗೆ ಬಹಳಷ್ಟು ಪುಣ್ಯ ಪ್ರಾಪ್ತಿಯಾಗಲಿದ್ದು, ಬದುಕಿನಲ್ಲಿ ನೀವು ಕಂಡಿರುವ ಆಸೆಗಳನ್ನು ತಾಯಿ ಈಡೇರಿಸುತ್ತಾಳೆ. ನಿಖರವಾಗಿ ಗುರಿ ಮುಟ್ಟುವಂತೆ ಮಾಡಿ, ಬದುಕಿನಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸುವಂತೆ ಮಾಡುತ್ತಾಳೆ.
ಫಲಾಫಲಗಳು
ಮಹಾಗೌರಿಯು ರಾಹುವಿನ ಅಧಿಪತಿಯಾಗಿರುವುದರಿಂದ ರಾಹುವಿನಿಂದಾಗುವ ಕಾಟಗಳನ್ನು ತಪ್ಪಿಸುತ್ತಾಳೆ. ಗೌರಿಯ ಆಶೀರ್ವಾದದಿಂದ ಸಂಪತ್ತು, ಆಯುಷ್ಯದ ಜೊತೆಗೆ ಆಧ್ಯಾತ್ಮದ ಲಾಭ ದೊರೆಯುತ್ತದೆ. ನಮ್ಮ ಮನಸ್ಸಿನಲ್ಲಿರುವ ಗೊಂದಲಗಳನ್ನು ನಿವಾರಿಸಿ ಆತ್ಮವಿಶ್ವಾಸ ತುಂಬಿ ಯಶಸ್ಸಿನ ಕಡೆಗೆ ದಾರಿ ತೋರುತ್ತಾಳೆ.
ಮಹಾಗೌರಿಯ ಕಠಿಣ ತಪಸ್ಸು
ಪುರಾಣದ ಪ್ರಕಾರ, ಶಿವವನ್ನು ಪಡೆಯಲು ಪಾರ್ವತಿ ದೇವಿಯು ಮನುಷ್ಯ ಅವತಾರ ಎತ್ತಿದಳು. ಅನ್ನ, ನೀರು ತ್ಯಜಿಸಿ ಸುದೀರ್ಘ ತಪಸ್ಸಿಗೆ ಕುಳಿತ ಅವಳ ಮೈಗೆ ಧೂಳು ಮತ್ತಿಕೊಂಡು, ಬಳ್ಳಿಗಳು ಬೆಳೆದವು. ಆಕೆಯ ಭಕ್ತಿಗೆ ಮೆಚ್ಚಿ ಪ್ರತ್ಯಕ್ಷನಾದ ಶಿವನು, ಆಕೆಯ ಸ್ಥಿತಿ ಕಂಡು ಗಂಗೆಯ ಪವಿತ್ರ ಜಲವನ್ನು ಪ್ರೋಕ್ಷಣೆ ಮಾಡಿದಾಗ ಆಕೆ ಮೊದಲಿನಂತಾದಳು. ನಂತರ ಮಹಾಗೌರಿಯನ್ನು ಶಿವ ವಿವಾಹವಾದನು.