Diwali | ಹಿ೦ದೂ ಸ೦ಪ್ರದಾಯದಲ್ಲಿ ದೀಪಾವಳಿ ಹಬ್ಬಕ್ಕೆ ಅತ್ಯಂತ ಮಹತ್ವವಿದೆ. ಈ ದಿನ ಶ್ರೀಮಹಾಲಕ್ಷ್ಮೀ ದೇವಿಯ ಪೂಜೆಯನ್ನು ಮಾಡುವ ಸ೦ಪ್ರದಾಯವಿದೆ. ದೀಪಾವಳಿಯ ಮೊದಲ ದಿನ ಧನತ್ರಯೋದಶಿ ಆಚರಣೆ ನಡೆಯುತ್ತದೆ. ಆ ದಿನ ಚಿನ್ನ, ಬೆಳ್ಳಿ ಅಥವಾ ಲೋಹದ ವಸ್ತುಗಳನ್ನು ಖರೀದಿಸಿದರೆ ಅದೃಷ್ಟ ಸಿಗುತ್ತದೆ ಎ೦ಬ ನ೦ಬಿಕೆ ಇದೆ. ಈ ಬಾರಿಯ ದೀಪಾವಳಿ ಹಬ್ಬದ ನಿಖರ ದಿನಾಂಕ ಹಾಗೂ ಪೂಜೆಯ ಮುಹೂರ್ತದ ವಿವರ ಇಲ್ಲಿದೆ.
ಶುಭ ಸಮಯ:
ದೃಕ್ ಪಂಚಾಂಗದ ಪ್ರಕಾರ, ಆಶ್ವಯುಜ ಮಾಸದ ಅಮಾವಾಸ್ಯೆ ತಿಥಿ ಅಕ್ಟೋಬರ್ 20ರಂದು ಮಧ್ಯಾಹ್ನ 3.44ಕ್ಕೆ ಆರಂಭವಾಗಿ ಅಕ್ಟೋಬರ್ 21 ರಂದು ಸಂಜೆ 5.54ಕ್ಕೆ ಮುಕ್ತಾಯವಾಗುತ್ತದೆ. ಆದ್ದರಿಂದ ಈ ವರ್ಷ ದೀಪಾವಳಿಯನ್ನು ಅಕ್ಟೋಬರ್ 20, ಸೋಮವಾರದಂದು ಆಚರಿಸಲಾಗುತ್ತದೆ.
ಶ್ರೀಮಹಾಲಕ್ಷ್ಮೀ ಪೂಜೆ ಅದೇ ದಿನ ಸಂಜೆ 7.08ರಿಂದ 8.18ರ ವರೆಗೆ ಮಾಡುವುದು ಅತ್ಯಂತ ಶುಭಕರ. ಪ್ರದೋಷ ಕಾಲ 5.46ರಿಂದ 8.18ರ ವರೆಗೆ ಇರುತ್ತದೆ.
ಪುರಾಣಗಳ ಪ್ರಕಾರ
ಪುರಾಣಗಳ ಪ್ರಕಾರ, ರಾವಣನನ್ನು ಸಂಹರಿಸಿ ಶ್ರೀರಾಮಚ೦ದ್ರರು ಸೀತೆಯ ಸಮೇತ ಅಯೋಧ್ಯೆಗೆ ಮರಳಿ ಬಂದ ದಿನವನ್ನು ದೀಪಾವಳಿಯಾಗಿ ಆಚರಿಸಲಾಯಿತು. ಆ ಸಂತೋಷದಲ್ಲಿ ಅಯೋಧ್ಯೆಯ ಜನರು ದೀಪಗಳನ್ನು ಬೆಳಗಿಸಿ, ಬಾಣಸಂಚವನ್ನು ಸುಟ್ಟು ಸ೦ಭ್ರಮಿಸಿದರು. ಹೀಗಾಗಿ ಈ ಹಬ್ಬವು ‘ಬೆಳಕಿನ ಹಬ್ಬ’ ವಾಗಿ ಪ್ರಸಿದ್ಧಿ ಪಡೆದಿದೆ.
ಬಲಿ ಅಮಾವಾಸ್ಯೆ
ಹಾಗೆಯೇ ಪಾ೦ಡವರು ಅಜ್ಞಾತವಾಸ ಮುಗಿಸಿ ಹಸ್ತಿನಾಪುರಕ್ಕೆ ಮರಳಿದ ದಿನವನ್ನೂ ದೀಪಾವಳಿಯಾಗಿ ಆಚರಿಸುತ್ತಾರೆ. ಕೇರಳದಲ್ಲಿ ಈ ದಿನವನ್ನು ಬಲಿ ಅಮಾವಾಸ್ಯೆ ಎ೦ದು ಕರೆಯುತ್ತಾರೆ. ಏಕೆಂದರೆ ಆ ದಿನ ವಾಮನ ಅವತಾರವು ಬಲಿಚಕ್ರವರ್ತಿಯನ್ನು ಪಾತಾಳಕ್ಕೆ ಕಳುಹಿಸಿದ ದಿನ ಎ೦ದು ನಂಬುತ್ತಾರೆ. ಈ ದಿನ ಬಲಿ ಭೂಮಿಗೆ ಬ೦ದು ಜನರ ದರ್ಶನ ಮಾಡುತ್ತಾನೆ ಎ೦ಬ ನ೦ಬಿಕೆಯಿದೆ.
ಇತಿಹಾಸದಲ್ಲೂ ದೀಪಾವಳಿಯ ವಿಶೇಷತೆ
ಇತಿಹಾಸದ ಪ್ರಕಾರ ದೀಪಾವಳಿಗೂ ಮಹತ್ವವಿದೆ. ವಿಕ್ರಮಾದಿತ್ಯರ ಪಟ್ಟಾಭಿಷೇಕ ಮತ್ತು ಶಾಲಿವಾಹನರ ಆಂಧ್ರ ಸಾಮ್ರಾಜ್ಯದ ಸ್ಥಾಪನೆ ಇದೇ ದಿನ ನಡೆದಿತ್ತು. ಹೀಗಾಗಿ ದೀಪಾವಳಿ ಕೇವಲ ಒಂದು ಹಬ್ಬವಲ್ಲ- ಇದು ಭಕ್ತಿ, ಇತಿಹಾಸ ಮತ್ತು ಆನಂದದ ಸಂಯೋಜನೆಯ ಹಬ್ಬವಾಗಿದೆ.




