ನವದೆಹಲಿ: ಮುಂಬರುವ 2025ರ ಮಹಾಕುಂಭದ ವೇಳೆ ವ್ಯಕ್ತಿಯೊಬ್ಬ ಭಯೋತ್ಪಾದನೆ ಹರಡುವುದಾಗಿ ಬೆದರಿಕೆ ಹಾಕುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ ಹರಿದಾಡಿದ ಬಳಿಕ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಡಿಸೆಂಬರ್ 24 ರಂದು ವ್ಯಾಪಕವಾಗಿ ಹಂಚಿಕೊಳ್ಳಲಾದ ವೀಡಿಯೊದಲ್ಲಿ ಹಿಂದೂ ಧರ್ಮ ಮತ್ತು ರಾಜಕೀಯ ವ್ಯಕ್ತಿಗಳ ವಿರುದ್ಧ ಅವಹೇಳನಕಾರಿ ಹೇಳಿಕೆಗಳಿವೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ವೀಡಿಯೊದಲ್ಲಿ, ವ್ಯಕ್ತಿಯು ಜನವರಿ 14 (ಮಕರ ಸಂಕ್ರಾಂತಿ) ಜನವರಿ 29 (ಮೌನಿ ಅಮಾವಾಸ್ಯೆ) ಮತ್ತು ಫೆಬ್ರವರಿ 3 (ವಸಂತ ಪಂಚಮಿ) ಸೇರಿದಂತೆ ಮಹಾಕುಂಭದ ಮಹತ್ವದ ದಿನಾಂಕಗಳಲ್ಲಿ ‘ಭಯೋತ್ಪಾದನೆಯನ್ನು’ ಪ್ರಚೋದಿಸುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ವರದಿಯಾಗಿದೆ.
ವೀಡಿಯೊ ಪ್ರಸಾರವಾದ ನಂತರ, ಪಿಲಿಭಿತ್ ಜಿಲ್ಲೆಯ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. “ಈ ವಿಷಯವು ತನಿಖೆಯಲ್ಲಿದೆ” ಎಂದು ಪೊಲೀಸ್ ವಕ್ತಾರರು ಹೇಳಿದರು, ಪ್ರಕರಣದಲ್ಲಿ ದಾಖಲಾದ ಜನರ ಸಂಖ್ಯೆಯ ಬಗ್ಗೆ ವಿವರಗಳನ್ನು ಬಹಿರಂಗಪಡಿಸುವುದನ್ನು ತಪ್ಪಿಸಿದರು.