ಅಂಚೆ ಕಚೇರಿಯಲ್ಲಿ ಹಲವು ರೀತಿಯ ಯೋಜನೆಗಳು ಲಭ್ಯವಿದ್ದು, ಇದರಲ್ಲಿ ನೀವು ಹೂಡಿಕೆ ಮಾಡುವ ಮೂಲಕ ರಿಸ್ಕ್ ಇಲ್ಲದೆ ಲಾಭವನ್ನು ಪಡೆಯಬಹುದು. ಆದರೆ, ನೀವು ಪಡೆಯುವ ಲಾಭವು ನೀವು ಆಯ್ಕೆ ಮಾಡುವ ಯೋಜನೆಯ ಮೇಲೆ ಅವಲಂಬಿತವಾಗಿರುತ್ತದೆ. ಆದ್ದರಿಂದ ನಿಮ್ಮ ಆರ್ಥಿಕತೆಗೆ ಅನುಗುಣವಾಗಿ ನೀವು ಪೋಸ್ಟ್ ಆಫೀಸ್ ಯೋಜನೆಯನ್ನು ಆರಿಸಿಕೊಳ್ಳಬೇಕು. ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ (monthly-income-scheme)ಯು ಪ್ರತಿ ತಿಂಗಳು ಆದಾಯವನ್ನು ಗಳಿಸಲು ಬಯಸುವವರಿಗೆ ಸೂಕ್ತವಾಗಿದೆ.
ಪೋಸ್ಟ್ ಆಫೀಸ್ ನೀಡುವ ಮಾಸಿಕ ಆದಾಯ ಯೋಜನೆಯ ಮೂಲಕ ಪ್ರತಿ ತಿಂಗಳು ಹಣವನ್ನು ಪಡೆಯಬಹುದು. ಈ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡುವ ಮೂಲಕ ನೀವು ಶೇಕಡಾ 6.6 ಬಡ್ಡಿದರವನ್ನು ಪಡೆಯಬಹುದು. ಈ ಯೋಜನೆಯ ಮುಕ್ತಾಯ ಅವಧಿಯು ಐದು ವರ್ಷಗಳು. ಇದನ್ನು ಸೇರುವುದರಿಂದ ಪ್ರತಿ ತಿಂಗಳು ಖಚಿತವಾದ ಆದಾಯ ಬರುತ್ತದೆ. ಆದರೆ, ನೀವು ಮುಂಗಡವಾಗಿ ಸ್ವಲ್ಪ ಮೊತ್ತವನ್ನು ಠೇವಣಿ ಮಾಡಬೇಕಾಗುತ್ತದೆ. ಈ ಹಣಕ್ಕೆ ಪ್ರತಿ ತಿಂಗಳು ನಿಮಗೆ ಬಡ್ಡಿಯನ್ನು ನೀಡಲಾಗುವುದು.
ಒಂದು ಖಾತೆಯಲ್ಲಿ ಗರಿಷ್ಠ 4.5 ಲಕ್ಷ ರೂ. ಠೇವಣಿ ಮಾಡಬಹುದು. ಹೀಗೆ ಮಾಡುವುದರಿಂದ ಪ್ರತಿ ವರ್ಷ 29,700 ರೂ. ಅಂದರೆ ತಿಂಗಳಿಗೆ ಸುಮಾರು 2500 ರೂ. ಸಿಗುತ್ತದೆ. ಅದೇ ಜಂಟಿ ಖಾತೆಯಲ್ಲಿ 9 ಲಕ್ಷ ರೂ.ವರೆಗೆ ಹೂಡಿಕೆ ಮಾಡಬಹುದು. ಆಗ ತಿಂಗಳಿಗೆ ಸುಮಾರು ರೂ.5 ಸಾವಿರ ಸಿಗುತ್ತದೆ ಎಂಬುದನ್ನು ತಿಳಿದುಕೊಳ್ಳಿ. ಈ ಹಣವನ್ನು ನೇರವಾಗಿ ನಿಮ್ಮ ಪೋಸ್ಟ್ ಆಫೀಸ್ ಉಳಿತಾಯ ಖಾತೆಗೆ ಜಮಾ ಮಾಡಲಾಗುತ್ತದೆ. ಈ ರೀತಿಯಲ್ಲಿ ನೀವು ಹೂಡಿಕೆ ಮಾಡುವ ಒಟ್ಟು ಮೊತ್ತದ ಆಧಾರದ ಮೇಲೆ ನೀವು ಪಡೆಯುವ ಆದಾಯವು ಬದಲಾಗುತ್ತದೆ.
ಕೇವಲ 1000 ರೂ.ಗೆ ನೀವು ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯಡಿ ಖಾತೆಯನ್ನು ತೆರೆಯಬಹುದು. 18 ವರ್ಷ ಮೇಲ್ಪಟ್ಟ ಯಾರಾದರೂ ಯೋಜನೆಗೆ ಸೇರಲು ಅರ್ಹರು. ನೀವು ಈ ಯೋಜನೆಗೆ ಸೇರಲು ಬಯಸಿದರೆ, ಒಂದು ವಿಷಯವನ್ನು ತಿಳಿದುಕೊಳ್ಳಬೇಕು. ನೀವು ಹಣವನ್ನು ಠೇವಣಿ ಮಾಡಿದ ನಂತರ ಒಂದು ವರ್ಷದೊಳಗೆ ಅವುಗಳನ್ನು ಹಿಂಪಡೆಯಲು ಯಾವುದೇ ಅವಕಾಶವಿರುವುದಿಲ್ಲ. ನೀವು ಮೆಚ್ಯೂರಿಟಿಯ ಮೊದಲು ಹಣವನ್ನು ಹಿಂಪಡೆಯಲು ಬಯಸಿದರೆ ನೀವು ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಅಂಚೆ ಕಚೇರಿಯಲ್ಲಿ ಈಗ ಮಾಸಿಕ ಆದಾಯ ಯೋಜನೆ ಮಾತ್ರವಲ್ಲದೆ ಇತರ ಉಳಿತಾಯ ಯೋಜನೆಗಳೂ ಲಭ್ಯವಿವೆ. ಸಾರ್ವಜನಿಕ ಭವಿಷ್ಯ ನಿಧಿ, ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ, ಅವಧಿ ಠೇವಣಿ, ಸುಕನ್ಯಾ ಯೋಜನೆ, ಹಿರಿಯ ನಾಗರಿಕರ ಉಳಿತಾಯ ಯೋಜನೆಗಳಂತಹ ವಿವಿಧ ಯೋಜನೆಗಳು ಲಭ್ಯವಿದೆ. ಆದ್ದರಿಂದ ನೀವು ನಿಮ್ಮ ಆಯ್ಕೆಯ ಯೋಜನೆಗೆ ಸೇರಬಹುದು. ಆದರೆ ಯೋಜನೆಗೆ ಸೇರುವ ಮೊದಲು ಎಲ್ಲಾ ಯೋಜನೆಗಳ ಬಗ್ಗೆ ತಿಳಿದುಕೊಳ್ಳಿ.