ಬೆಂಗಳೂರು: ರಾಜ್ಯದ ವಿವಿದೆಡೆ ಭಾರೀ ಮಳೆಯಾಗುವ ಹಿನ್ನೆಲೆ, ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಇಂದು, ನಾಳೆ ರೆಡ್ ಅಲರ್ಟ್ ಘೋಷಿಸಲಾಗಿದ್ದು, 17 ಮತ್ತು 18 ರಂದು ಆರೆಂಜ್ ಅಲರ್ಟ್ ಹಾಗು 19ರಂದು ಯೆಲ್ಲೋ ಅಲರ್ಟ್ ಜಾರಿ ಮಾಡಲಾಗಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.
ಜೊತೆಗೆ ಬೆಳಗಾವಿ, ಧಾರವಾಡ, ಹಾವೇರಿ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಯಲ್ಲೂ ಧಾರಾಕಾರ ಮಳೆಯಾಗಲಿದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಇನ್ನು, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮುಂದಿನ ಎರಡು ದಿನಗಳ ಕಾಲ ಸಾಧಾರಣದಿಂದ ಉತ್ತಮ ಮಳೆಯಾಗುವ ಸಂಭವವಿದ್ದು ಚಿತ್ರದುರ್ಗ, ಮೈಸೂರಿನಲ್ಲೂ ಮಳೆಯಾಗಲಿದೆ.
ಇನ್ನು, ಜೂನ್ 1ರಿಂದ ಇಲ್ಲಿಯ ತನಕ ದೇಶದಲ್ಲಿ ಶೇ.25ರಷ್ಟು ಅಧಿಕ ಪ್ರಮಾಣದಲ್ಲಿ ಮಳೆ ಸುರಿದಿದ್ದು, 36 ಉಪವಿಭಾಗಗಳ ಪೈಕಿ 12ರಲ್ಲಿ ಅತಿಹೆಚ್ಚು ಮಳೆ (ಶೇ.60ಕ್ಕಿಂತ ಅಧಿಕ), 10 ರಲ್ಲಿ ಹೆಚ್ಚು ಮಳೆ (ಶೇ.20ರಿಂದ ಶೇ.59) ಮತ್ತು 9 ಕಡೆ ಸಾಧಾರಣ ಮಳೆ (ಶೇ.-19ರಿಂದ ಶೇ.19) ವರದಿಯಾಗಿದೆ.