ದಾಂಡೇಲಿ: ದಾಂಡೇಲಿ ನಗರದ ಅಂಬೇವಾಡಿಯ ಬಿಸಿಎಂ ವಸತಿ ನಿಲಯದಲ್ಲಿದ್ದ ಕಾಲೇಜು ವಿದ್ಯಾರ್ಥಿಯೋರ್ವ ಅನಾರೋಗ್ಯದಿಂದ ಸಾವನ್ನಪ್ಪಿದ ಘಟನೆ ನಡೆದಿದೆ. ಹುಬ್ಬಳ್ಳಿಯ ಅನೀಶ್ ಬಿ.ಗಾಣಿಗೇರ ಮೃತ ದುರ್ದೈವಿ ವಿದ್ಯಾರ್ಥಿಯಾಗಿದ್ದಾನೆ.
ಅನೀಶ ಅಂಬೇವಾಡಿಯ ಜಿಟಿಟಿಸಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಡಿಪ್ಲೋಮಾ ವಿದ್ಯಾರ್ಥಿಯಾಗಿದ್ದನು. ಕಳೆದ ಅನೇಕ ದಿನಗಳಿಂದ ಈತನಿಗೆ ಅನಾರೋಗ್ಯ ಸಮಸ್ಯೆ ಕಾಡುತ್ತಿತ್ತು ಎಂದು ಈತನ ಸಹಪಾಠಿಗಳು ಮಾಹಿತಿ ನೀಡಿದ್ದಾರೆ.
ಮಂಗಳವಾರ ಆರೋಗ್ಯದಲ್ಲಿ ಸ್ವಲ್ಪ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಾಲೇಜಿಗೆ ಹೋಗದೇ ಅನೀಶ ವಸತಿ ನಿಲಯದಲ್ಲೇ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದನು. ತೀವ್ರ ಅಸ್ವಸ್ಥಗೊಂಡಿದ್ದ ಈತನನ್ನು ಹಾಸ್ಟೆಲ್ ಸಿಬ್ಬಂದಿ ದಾಂಡೇಲಿ ಸಾರ್ವಜನಿಕ ಆಸ್ಪತ್ರೆಗೆ ಕರೆತಂದಿದ್ದರು. ಆದರೆ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ವಿದ್ಯಾರ್ಥಿ ಮೃತಪಟ್ಟಿದ್ದಾನೆ.
ವಿದ್ಯಾರ್ಥಿ ಸಾವನ್ನಪ್ಪಿದ ಹಿನ್ನಲೆ ದಾಂಡೇಲಿ ಆಸ್ಪತ್ರೆಗೆ ನಗರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.