ಬೆಂಗಳೂರು: ಹಾಲು, ವಿದ್ಯುತ್, ಕುಡಿಯುವ ನೀರು ಸೇರಿದಂತೆ ಅನೇಕ ಅಗತ್ಯ ವಸ್ತುಗಳ ಬೆಲೆ ಏರಿಕೆಯ ವಿರುದ್ಧ ಜನರ ಆಕ್ರೋಶ ಹೆಚ್ಚಾಗುತ್ತಿದೆ. ಇದೇ ಸಂದರ್ಭದಲ್ಲಿ, ಡೀಸೆಲ್ ದರ ಏರಿಕೆಯನ್ನು ಪ್ರತಿಭಟಿಸಿ ಲಾರಿ ಮಾಲೀಕರು ಸರ್ಕಾರದ ವಿರುದ್ಧ ಸಿಡಿದೆದ್ದು ಮುಷ್ಕರಕ್ಕೆ ಸಿದ್ಧರಾಗುತ್ತಿದ್ದಾರೆ.
ಡೀಸೆಲ್ ದರ ಏರಿಕೆಯಿಂದ ಸಾಗಾಣಿಕಾ ವ್ಯವಸ್ಥೆ ಬಿಗಡಾಯಿಸಲಿದೆ ಎಂದು ಲಾರಿ ಮಾಲೀಕರು ಎಚ್ಚರಿಸಿದ್ದಾರೆ. ಮುಷ್ಕರದ ರೂಪುರೇಷೆ ನಿರ್ಧರಿಸಲು ನಾಳೆ ರಾಜ್ಯ ಲಾರಿ ಮಾಲೀಕರ ಸಂಘದ ಸಭೆ ನಡೆಯಲಿದೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಎರಡು ಬಾರಿ ಡೀಸೆಲ್ ಬೆಲೆ ಹೆಚ್ಚಿಸಲಾಗಿದೆ. “ಸರ್ಕಾರದ ಈ ನಿರ್ಧಾರದಿಂದ ಸಾಗಾಣಿಕಾ ವ್ಯವಹಾರದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ನಾಳೆ ಸಭೆ ನಡೆಸಿ, ಮುಂದಿನ ವಾರ ಮುಷ್ಕರಕ್ಕೆ ಕರೆ ನೀಡಲು ನಿರ್ಧರಿಸಿದ್ದೇವೆ” ಎಂದು ರಾಜ್ಯ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಜಿ.ಆರ್. ಷಣ್ಮುಗಪ್ಪ ಹೇಳಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ಸರ್ಕಾರ ಡೀಸೆಲ್‌ಗೆ 2.73% ಮಾರಾಟ ತೆರಿಗೆ ಹೇರಿದ್ದು, ಇದರ ಪರಿಣಾಮವಾಗಿ ರಾಜ್ಯದಲ್ಲಿ ಡೀಸೆಲ್ ಬೆಲೆ ಲೀಟರ್ಗೆ 2 ರೂಪಾಯಿ ಏರಿಕೆಯಾಗಿದೆ. ಇದರಿಂದಾಗಿ ಸಾಗಾಣಿಕಾ ವೆಚ್ಛ ಹೆಚ್ಚಾಗುವುದರೊಂದಿಗೆ ಸರಕು ದರಗಳು ಏರುವ ಆತಂಕವೂ ಹೆಚ್ಚಾಗಿದೆ.
ಲಾರಿ ಮಾಲೀಕರು ಡೀಸೆಲ್ ದರ ಕಡಿಮೆ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸಲು ಶೀಘ್ರದಲ್ಲೇ ಸರಕು ಸಾಗಾಟ ಸೇವೆಗಳನ್ನು ನಿಲ್ಲಿಸಲು ತೀರ್ಮಾನಿಸಿದ್ದಾರೆ. ಈ ನಡುವೆ, ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬರದಿದ್ದರೆ, ರಾಜ್ಯದ ಸಾಗಾಣಿಕಾ ವ್ಯವಸ್ಥೆ ಸ್ಥಗಿತಗೊಳ್ಳುವ ಸ್ಥಿತಿ ಉಂಟಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.