ಮಂಗಳೂರು: ದೇಶದ ವಿವಿಧೆಡೆ ರೈಲು ಹಳಿ ತಪ್ಪಿಸುವ ದುಷ್ಕೃತ್ಯಗಳು ವರದಿಯಾಗುತ್ತಿರುವ ಬೆನ್ನಲ್ಲೇ ಮಂಗಳೂರಿನಲ್ಲೂ ಇಂತಹದ್ದೊಂದು ಕೃತ್ಯ ನಡೆದಿರುವುದು ಬೆಳಕಿಗೆ ಬಂದಿದೆ. ಉಳ್ಳಾಲ ತಾಲೂಕಿನ ತೊಕ್ಕೊಟ್ಟುವಿನಲ್ಲಿ ರೈಲ್ವೇ ಹಳಿಗಳ ಮೇಲೆ ಆಗಂತುಕರು ಕಲ್ಲುಗಳನ್ನಿಟ್ಟು ಪರಾರಿಯಾದ ಘಟನೆ ವರದಿಯಾಗಿದೆ.
ಶನಿವಾರ ತಡರಾತ್ರಿ ತೊಕ್ಕೊಟ್ಟುವಿನ ರೈಲ್ವೇ ಹಳಿಯ ಮೇಲೆ ಕೇರಳ ಮಾರ್ಗಕ್ಕೆ ರೈಲೊಂದು ತೆರಳುತ್ತಿದ್ದ ಸಂದರ್ಭದಲ್ಲಿ ಸ್ಥಳೀಯರಿಗೆ ಭಾರೀ ಪ್ರಮಾಣದ ಸದ್ದು ಕೇಳಿಸಿತ್ತು. ಇದಾದ ಸ್ವಲ್ಪ ಹೊತ್ತಿನಲ್ಲೇ ಮತ್ತೊಂದು ರೈಲು ಚಲಿಸಿದಾಗಲೂ ಅದೇ ರೀತಿ ಸದ್ದು ಕೇಳಿದ್ದು ಆತಂಕಗೊಂಡ ಸ್ಥಳೀಯರು ರೈಲ್ವೇ ಹಳಿಯತ್ತ ಧಾವಿಸಿದ್ದಾರೆ. ಈ ವೇಳೆ ತೊಕ್ಕೊಟ್ಟು ಓವರ್ ಬ್ರಿಡ್ಜ್ ಕಡೆಯಿಂದ ವೀಕ್ಷಿಸಿದ ಮಹಿಳೆಯರಿಗೆ ರೈಲ್ವೇ ಹಳಿಯ ಅಕ್ಕಪಕ್ಕದಲ್ಲಿ ಆಗಂತುಕರಿಬ್ಬರು ಕಾಣಿಸಿದ್ದಾರೆ.
ಕೂಡಲೇ ರೈಲ್ವೇ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದು, ರೈಲ್ವೇ ಪೊಲೀಸರೊಂದಿಗೆ ಉಳ್ಳಾಲ ಠಾಣೆ ಪೊಲೀಸರು ಸಹ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಹಳಿಗಳ ಮೇಲೆ ಜಲ್ಲಿಕಲ್ಲುಗಳನ್ನು ಇರಿಸಿ, ಅವು ರೈಲು ಆಗಮಿಸಿದಾಗ ಜರಿದುಹೋಗಿರುವುದು ಪತ್ತೆಯಾಗಿದೆ. ಕೂಡಲೇ ಎಚ್ಚೆತ್ತ ರೈಲ್ವೇ ಪೊಲೀಸರು ಇತರೆ ಹಳಿಗಳನ್ನೂ ಸಹ ತಪಾಸಣೆ ನಡೆಸಿ ಅಪಾಯ ಇಲ್ಲದಿರುವುದನ್ನು ಖಚಿತಪಡಿಸಿದ್ದಾರೆ.
ಇತ್ತೀಚೆಗಷ್ಟೇ ಪಾಕ್ ಭಯೋತ್ಪಾದಕ ಫರ್ಹಾತುಲ್ಲಾ ಘೋರಿ ಭಾರತದಾದ್ಯಂತ ರೈಲುಗಳನ್ನು ಹಳಿ ತಪ್ಪಿಸುವ ಎಚ್ಚರಿಕೆ ನೀಡಿದ್ದ ಬೆನ್ನಲ್ಲೇ ಈ ರೀತಿಯ ಕೃತ್ಯ ನಡೆದಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದ್ದು, ಪೊಲೀಸರು ಕಿಡಿಗೇಡಿಗಳ ಪತ್ತೆಗೆ ತನಿಖೆ ಮುಂದುವರೆಸಿದ್ದಾರೆ.