ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾದ ಪರಿಣಾಮ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂದು ಸೇರಿದಂತೆ ಫೆಬ್ರುವರಿ 23 ರವರೆಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ವಾಯುಭಾರ ಕುಸಿತದಿಂದ ಎರಡು ದಿನಗಳಿಂದ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಗುಡುಗು ಮತ್ತು ಸಿಡಿಲು ಸಹಿತ ಭಾರಿ ಮಳೆಯಾಗಿದ್ದು, ದಾವಣಗೆರೆ, ಚಿತ್ರದುರ್ಗ, ಕೊಡಗು ಜಿಲ್ಲೆಯ ಹಲವೆಡೆ ಆಲಿಕಲ್ಲು ಮಳೆಯಾಗಿದೆ. ನಿನ್ನೆ ಸುರಿದ ಭಾರಿ ಮಳೆಯಿಂದ ಹಲವೆಡೆ ಕಾಫಿ, ಹಸಿಮೆಣಸಿನ ಕಾಯಿ ಆಲಿಕಲ್ಲು ಮಳೆಗೆ ಸಂಪೂರ್ಣ ನಾಶವಾಗಿದೆ.
ವಾಯುಭಾರ ಕುಸಿತ ಹಿನ್ನಲೆ ಇಂದು ಬೆಳಗ್ಗೆಯಿಂದಲೇ ರಾಜ್ಯದ ಹಲವೆಡೆ ಮೋಡ ಕವಿದ ವಾತಾವರಣ ಸೃಷ್ಟಿಯಾಗಿದ್ದು, ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಶಿರಸಿ ಸೇರಿದಂತೆ ಗಡಿಭಾಗದ ಜಿಲ್ಲೆಗಳಾದ ಬೆಳಗಾವಿ, ವಿಜಾಪುರ, ಬಾಗಲಕೋಟೆ, ಧಾರವಾಡ ಸೇರಿ ರಾಜ್ಯದ ವಿವಿಧ ಭಾಗಗಳಲ್ಲಿ ಗುಡುಗು ಸಹಿತ ಬರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.
ಇನ್ನು ಚಿತ್ರದುರ್ಗ, ದಾವಣಗೆರೆ, ಗದಗ, ಗೋಕರ್ಣ, ಹೊನ್ನಾವರ, ಕಲಬುರ್ಗಿ,ಮೈಸೂರು, ರಾಯಚೂರು, ಇಂದು ಮಳೆಯಾಗಲಿದ್ದು, ಆಗುಂಬೆ, ಬೆಳಗಾವಿ, ಬಾದಾಮಿ, ಮಡಿಕೇರಿ, ಮಂಡ್ಯ, ಬೆಂಗಳೂರು ನಗರದಲ್ಲಿ ಇಂದು ಹಾಗೂ ನಾಳೆ ಮಳೆಯಾಗುವ ಸಾಧ್ಯತೆಯಿದೆ ಎನ್ನಲಾಗಿದ್ದು, ಮಂಗಳೂರಿನಲ್ಲಿ ಫೆಬ್ರುವರಿ 22, 23ರಂದು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.