ಬೆಂಗಳೂರು: ಬೆಂಗಳೂರಿನ ಕೋಣನಕುಂಟೆಯ ಚುಂಚನಕಟ್ಟೆ ಎಸ್ಬಿಐ ಲೇಔಟ್ ನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಮಹೇಶ್, ಜ್ಯೋತಿ ಹಾಗೂ ಅವರ ಮಗ ನಂದೀಶ್ ಗೌಡ ಆತ್ಮಹತ್ಯೆ ಮಾಡಿಕೊಂಡಿದ್ದು, ಇದೀಗ ಅವರ ಸಾವಿಗೂ ಮುನ್ನ ಅನಾರೋಗ್ಯದಿಂದ ಈ ರೀತಿ ಮಾಡಿಕೊಳ್ಳುತ್ತಿದ್ದೇವೆ ಎಂದು ಬರೆದಿರುವ ಡೆತ್ನೋಟ್ ದೊರೆತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಹೌದು, ಮಧ್ಯಮ ವರ್ಗದ ಕುಟುಂಬಸ್ಥರಾಗಿರುವ ಮಹೇಶ್ ಕಳೆದ ಒಂದು ವಾರದಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದು, ಈ ಹಿಂದೆ ಹರ್ನಿಯಾ ಆಪರೇಷನ್ ಮಾಡಿಸಿಕೊಂಡಿದ್ದರು. ಹೊಟ್ಟೆನೋವು ತೀವ್ರವಾಗಿದ್ದರಿಂದ ಆಸ್ಪತ್ರೆಗೆ ತೆರಳಿದ್ದು, ವೈದ್ಯಕೀಯ ತಪಾಸಣೆ ವೇಳೆ ಕ್ಯಾನ್ಸರ್ ಇರುವುದು ಗೊತ್ತಾಗಿದೆ. ತನ್ನ ಸಾವಿನ ನಂತರ ತನ್ನ ಹೆಂಡ್ತಿ, ಮಕ್ಕಳ ಜೀವನ ಕಷ್ಟ ಎಂದು ನಿರ್ಧಾರ ಮಾಡಿ ಕುಟುಂಬ ಸಮೇತ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.
ಇನ್ನು, ಬಿಬಿಎಂಪಿ ಗುತ್ತಿಗೆ ನೌಕರನಾಗಿ ಕೆಲಸ ಮಾಡುತ್ತಿದ್ದ ಮಹೇಶ್ ಮೂಲತಃ ಮಳವಳ್ಳಿಯವರಾಗಿದ್ದು, ಹಲವು ವರ್ಷಗಳಿಂದ ನಗರದಲ್ಲಿ ವಾಸವಾಗಿದ್ದರು. ಅನಾರೋಗ್ಯ ಹಿನ್ನೆಲೆಯಲ್ಲಿ ಮಹೇಶ್ ಮನೆಯ ರೂಮ್ವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದರೆ, ಮತ್ತೊಂದು ರೂಮ್ನಲ್ಲಿ ಜ್ಯೋತಿ ಹಾಗೂ ಮಗ ನಂದೀಶ್ ವಿಷ ಸೇವಿಸಿದ್ದಾರೆ.