ರಾಜಸ್ಥಾನದ ಜೋಧಪುರ ಮೂಲದ ಮಾಡೆಲ್ ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಇಬ್ಬರು ಆರೋಪಿಗಳು ಉದಯಪುರ ಮೂಲದವರಾಗಿದ್ದು, ಒಬ್ಬ ಮಹಿಳೆ ಮತ್ತು ಪುರುಷನಿದ್ದು, ಅವರ ಹೆಸರು ದೀಪಾಲಿ ಮತ್ತು ಅಕ್ಷಯ್ ಎಂದು ಪೊಲೀಸರು ತಿಳಿಸಿದ್ದಾರೆ.
ಜೋಧಪುರ ಮೂಲದ ಫ್ಯಾಶನ್ ಮಾಡೆಲ್ ಗುಂಗುನ್ ಉಪಾಧ್ಯಾಯ ಶನಿವಾರ ರಾತ್ರಿ ರತನಾಡದ ಲಾರ್ಡ್ಸ್ ಇನ್ ಹೋಟೆಲ್‌ನಲ್ಲಿ ಆತ್ಮಹತ್ಯೆಗೆ ಯತ್ನಸಿದ್ದು, ಘಟನೆಯಲ್ಲಿ ಗುಂಗುನ್ ಗಂಭೀರವಾಗಿ ಗಾಯಗೊಂಡಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಘಟನೆ ಬಗ್ಗೆ ಸಂತ್ರಸ್ತೆ ಹಾಗೂ ಆಕೆಯ ತಂದೆ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡುಪೊಲೀಸರು ತನಿಖೆ ಕೈಗೊಂಡಾಗ ಕೆಲವೊಂದು ಶಾಕಿಂಗ್ ವಿಷಯಗಳು ಬಯಲಿಗೆ ಬಿದ್ದಿವೆ. ಪೊಲೀಸರ ಪ್ರಕಾರ, ಆರೋಪಿಗಳು ಮಾಡೆಲ್ ಗುನ್ ಗುನ್ ಉಪಯೋಗಿಸಿಕೊಂಡು ಭಿಲ್ವಾರಾ ಸಚಿವರನ್ನು ಹನಿ ಟ್ರ್ಯಾಪ್‌ಗೆ ಗುರಿಯಾಗಿಸಲು ಪ್ಲ್ಯಾನ್ ಮಾಡಿದ್ದರು. ಅಶೋಕ್ ಗೆಹ್ಲೋಟ್ ಸರ್ಕಾರದ ಭಿಲ್ವಾರದ ಸಚಿವರು ಆರೋಪಿಗಳ ಫೈಲ್ ಅನ್ನು ಕ್ಲಿಯರ್ ಮಾಡಲು ನಿರಾಕರಿಸಿದ್ದರು.
ಇದರಿಂದ ಆರೋಪಿಗಳಾದ ದೀಪಾಲಿ ಮತ್ತು ಅಕ್ಷಯ್ ಬಿಲ್ವಾರ ಸಚಿವರನ್ನು ಹನಿ ಟ್ರ್ಯಾಪ್‌ಗೆ ಮಾಡಿ ಬ್ಲ್ಯಾಕ್ ಮೇಲ್ ಮಾಡಲು ಮಾಡೆಲ್ ಗುನ್ ಗುನ್ ಅವರನ್ನು ಬಳಸಿಕೊಳ್ಳಲು ಪ್ರಯತ್ನಿಸಿದ್ದರು ಎಂದು ಡಿಸಿಪಿ ಭುವನ್ ಭೂಷಣ್ ಹೇಳಿದ್ದಾರೆ.
ಯೋಜನೆಯ ಪ್ರಕಾರ ಮಾಡೆಲಿಂಗ್ ಅಸೈನ್ ಮೆಂಟ್ ಇದೆಯೆಂದು ಮಾಡೆಲ್ ಗುಂಗುನ್ ಅವರನ್ನು ಪರಿಚಯ ಮಾಡಿಕೊಂಡಿದ್ದಾರೆ. ಈ ಕ್ರಮದಲ್ಲಿ ಕಾರ್ಯಕ್ರಮವೊಂದರಲ್ಲಿ ಅವಕಾಶವಿದೆ ಎಂದು ನಂಬಿಸಿ ಭಿಲ್ವಾರಕ್ಕೆ ಸಂತ್ರಸ್ತೆಯನ್ನು ಕರೆದುಕೊಂಡು ಹೋಗಿದ್ದಾರೆ.
ಅಲ್ಲಿಗೆ ಹೋದಾಗ ಆರೋಪಿಗಳು ಸಚಿವರೊಂದಿಗೆ ಸಮಯ ಕಳೆಯುವಂತೆ ಬಲವಂತ ಮಾಡಿದ್ದಾರೆ. ಇದಕ್ಕೆ ಗುಂಗುನ್ ನಿರಾಕರಿಸಿ ಅವರಿಂದ ತಪ್ಪಿಸಿಕೊಂಡು ಜೋಧಪುರ ತಲುಪಿದ್ದಾಳೆ. ಅಲ್ಲಿ ಲಾರ್ಡ್ಸ್ ಹೋಟೆಲ್‌ಗೆ ಇಳಿದು ತನ್ನ ತಂದೆಗೆ ಫೋನ್ ಮಾಡಿ ನಡೆದ ಘಟನೆಯನ್ನು ವಿವರಿಸಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾಳೆ. ಆಕೆಯ ತಂದೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆತನ ಮಾಹಿತಿಯೊಂದಿಗೆ ಪೊಲೀಸರು ಕೂಡಲೇ ಹೋಟೆಲ್‌ಗೆ ಧಾವಿಸಿದ್ದಾರೆ.
ಆದರೆ ಅದಾಗಲೇ ಗುಂಗುನ್ ಹೋಟೆಲ್ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ಡಿಸಿಪಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಬಳಿಕ ಗುಂಗುನ್ ಅವರನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದು, ಅವರಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದು, ಕಾಲು ಮತ್ತು ಎದೆಯ ಮೂಳೆ ಮುರಿತವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.