ಭುವನೇಶ್ವರ್: ಒಡಿಶಾ ರಾಜ್ಯದ ಸೋನೆಪುರ ಜಿಲ್ಲೆಯಲ್ಲಿ ಅದ್ದೂರಿ ವಿವಾಹ ಸಮಾರಂಭದಲ್ಲಿ ದುರಂತ ಸಂಭವಿಸಿದ್ದು, ತವರು ಮನೆಯನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತ ವಧು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.
ವಿವರಗಳ ಪ್ರಕಾರ, ಮುರಳಿ ಸಾಹು ಮತ್ತು ಮೇನಕಾ ಅವರ ಪುತ್ರಿ ಗುಪ್ತೇಶ್ವರಿ ಸಾಹು ಅವರು ಗುರುವಾರ ರಾತ್ರಿ ರೋಸಿ ಟೆಂಟ್ಸ್ ಗ್ರಾಮದ ಬಿಸಿಕೇಶನ್ ಪ್ರಧಾನ್ ಎಂಬ ಯುವಕನನ್ನು ವಿವಾಹವಾದರು. ಮರುದಿನ (ಇಂದು) ಬೆಳಿಗ್ಗೆ ವಧುವನ್ನು ತವರು ಮನೆಯಿಂದ ಅತ್ತೆ ಮನೆಗೆ ಕಳುಹಿಸುವ ಸಂಪ್ರದಾಯ ನಡೆಸಲು ಮುಂದಾಗಿದ್ದರು. ಈ ವೇಳೆ ತವರು ಮನೆ ನೆನೆದು ವಧು ಬಿಕ್ಕಿ ಬಿಕ್ಕಿ ಅತ್ತಿದ್ದು, ಏಕಾಏಕಿ ಹೃದಯಾಘಾತ ಸಂಭವಿಸಿದೆ. ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಆಗಲೇ ಅವರ ಪ್ರಾಣಪಕ್ಷಿ ಹಾರಿ ಹೋಗಿದೆ ಎಂದು ವೈದ್ಯರು ಖಚಿತಪಡಿಸಿದರು. ಹಸ್ತಾಂತರದ ಸಮಯದಲ್ಲಿ ಅತಿಯಾಗಿ ಅತ್ತಿದ್ದು ಹೃದಯಾಘಾತಕ್ಕೆ ಕಾರಣವಾಯಿತು ಎಂದು ವೈದ್ಯರು ಹೇಳಿದ್ದಾರೆ.
ಮದುವೆಯಾದ ಕೆಲವೇ ಗಂಟೆಗಳಲ್ಲಿ ವಧು ಸಾವನ್ನಪ್ಪಿದ್ದರಿಂದ ಕುಟುಂಬ ಸದಸ್ಯರು ಸೇರಿದಂತೆ ಸಂಬಂಧಿಕರು ಕಣ್ಣೀರು ಹಾಕುತ್ತ, ನೀರಸದಿಂದ ತನ್ನ ಕಣ್ಣು ತಿರುಗಿ ಬಿದ್ದಿದ್ದಾಳೆ ಎಂದು ಎಂದುಕೊಂಡಿದ್ದೆವು, ಆದರೆ ದುರಂತ ಸಂಭವಿಸುತ್ತದೆ ಎಂದು ನಿರೀಕ್ಷಿಸಿರಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ವಧುವಿನ ಸಾವಿನೊಂದಿಗೆ ಎರಡೂ ಕುಟುಂಬಗಳಲ್ಲಿ ನೀರಸ ಮೌನ ಆವರಿಸಿದೆ.