ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆ ರಂಗೇರುತ್ತಿದ್ದು, ಈ ಮಧ್ಯೆ ಆಡಳಿತಾರೂಢ ಎಐಎಡಿಎಂಕೆ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಮಹಿಳೆಯರು, ವಿದ್ಯಾರ್ಥಿಗಳು ಹಾಗೂ ನಿರುದ್ಯೋಗಿ ಯುವಕರನ್ನು ಸೆಳೆಯಲು ಅತ್ಯಂತ ದುಬಾರಿ ಭರವಸೆಗಳನ್ನು ಪ್ರಣಾಳಿಕೆಯಲ್ಲಿ ತಿಳಿಸಿದೆ.
ಹೌದು. ಭಾನುವಾರ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಓ ಪನ್ನೀರಸೆಲ್ವಂ ಅವರು ಭಾನುವಾರ ಎಐಎಡಿಎಂಕೆಯ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಮನೆ ಮನೆಗೆ ಉಚಿತ ವಾಷಿಂಗ್ ಮಶೀನ್, ಸೋಲಾರ್ ಸ್ಟವ್, ವಿದ್ಯಾರ್ಥಿಗಳಿಗೆ ಎರಡು ಜಿಬಿ ಇಂಟರ್ನೆಟ್, ಉಚಿತ ಕೇಬಲ್ ಕನೆಕ್ಷನ್, ಮನೆ ಬಾಗಿಲಿಗೆ ರೇಶನ್ ಡೆಲಿವರಿ, ಮನೆಯ ಒಬ್ಬ ಸದಸ್ಯನಿಗೆ ಸರ್ಕಾರಿ ಕೆಲಸ ಹೀಗೆ ವಿವಿಧ ಭರವಸೆಗಳನ್ನು ಪ್ರಣಾಳಿಕೆಯಲ್ಲಿ ನೀಡಲಾಗಿದೆ.
ಸರ್ಕಾರಿ ಮಹಿಳಾ ಉದ್ಯೋಗಿಗಳಿಗೆ ಒಂದು ವರ್ಷದ ಹೆರಿಗೆ ರಜೆ, ವರ್ಷಕ್ಕೆ ಆರು ಗ್ಯಾಸ್ ಸಿಲಿಂಡರ್, ತೈಲ ದರ ಇಳಿಕೆ, ಮಹಿಳೆಯರು ಸಾರಥ್ಯ ವಹಿಸಿದ ಕುಟುಂಬಕ್ಕೆ ಮಾಸಿಕ 1500 ರೂ., ಉಚಿತ ವಾಷಿಂಗ್ ಮಶೀನ್, ಉಚಿತ ಕೇಬಲ್ ಟಿವಿ ಕನೆಕ್ಷನ್, ವೃದ್ಧಾಪ್ಯ ಮಾಶಾಸನ ಒಂದು ಸಾವಿರದಿಂದ ದಿಂದ 2,000ಕ್ಕೆ ಏರಿಕೆ ಮಾಡುವುದಾಗಿ ಹೇಳಿ ಮತ್ತೆ ಅಧಿಕಾರಕ್ಕೆ ಏರಲು ಎಐಎಡಿಎಂಕೆ ಪ್ಲ್ಯಾನ್ ರೂಪಿಸಿದೆ.