ನವದೆಹಲಿ: ದೇಶಾದ್ಯಂತ ಕೃಷಿಕರು ಹೆಚ್ಚಾಗಿ ಬಳಸುವ ಡೈ ಅಮೋನಿಯಂ ಫಾಸ್ಪೆಟ್ (ಡಿಎಪಿ) ಮತ್ತು ಯೂರಿಯಾ ರಹಿತ ರಸಗೊಬ್ಬರದ ಮೇಲಿನ ಸಬ್ಸಿಡಿಯನ್ನು ಕೇಂದ್ರ ಸರಕಾರ ಏರಿಕೆ ಮಾಡಿದೆ.
ಕಳೆದ ತಿಂಗಳೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಉನ್ನತ ಸಮಿತಿ ರಸಗೊಬ್ಬರದ ಮೇಲಿನ ಸಬ್ಸಿಡಿಯನ್ನು ಶೇ.140ರಷ್ಟು ಏರಿಕೆ ಮಾಡಲು ನಿರ್ಧರಿಸಿತ್ತು. ಅದರಂತೆ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟದಲ್ಲಿ ಡಿಎಪಿ ಮತ್ತು ಯೂರಿಯಾ ರಹಿತ ರಸಗೊಬ್ಬರದ ಮೇಲಿನ ಸಬ್ಸಿಡಿ ಹೆಚ್ಚಳ ಮಾಡಲು ಕೇಂದ್ರ ಸರ್ಕಾರ ನಿರ್ಧಾರ ತೆಗೆದುಕೊಂಡಿದೆ.
ಈ ನಿರ್ಧಾರದಿಂದಾಗಿ ರೈತರಿಗೆ ಪ್ರತೀ ಬ್ಯಾಗ್ ಡಿಎಪಿ ಹಳೇ ದರ 1,200 ರೂ.ಗಳಿಗೇ ಸಿಗಲಿದ್ದು, ಪ್ರತೀ ಚೀಲ 50 ಕೆಜಿ ಇರಲಿದೆ. ಇದಕ್ಕೂ ಮೊದಲು ಡಿಎಪಿ ಗೊಬ್ಬರದ ಮೇಲಿನ ಸಬ್ಸಿಡಿ ಪ್ರತಿ ಬ್ಯಾಗ್ ಗೆ 500 ರೂ.ಗಳಿತ್ತು. ಆದರೆ ರಸಗೊಬ್ಬರ ಕಂಪೆನಿಗಳು ಗೊಬ್ಬರದ ಮೇಲಿನ ದರ ಏರಿಕೆ ಮಾಡಿದ್ದರಿಂದ ಡಿಎಪಿ ದರವೂ ಹೆಚ್ಚಾಗಿತ್ತು. ಇದನ್ನು ಮನಗಂಡ ಕೇಂದ್ರ ಸರಕಾರ ಸಬ್ಸಿಡಿಯನ್ನು 500ರಿಂದ 1,200 ರೂ.ಗಳಿಗೆ ಏರಿಸಿದೆ.