ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರು ಹತ್ಯೆ ಹಿನ್ನೆಲೆ, ದೊಡ್ಡಬಳ್ಳಾಪುರದಲ್ಲಿ ಇಂದು ನಡೆಯಬೇಕಿದ್ದ ‘ಜನೋತ್ಸವ ಹಾಗೂ ಸರ್ವರ ವಿಕಾಸಕ್ಕೆ ಸಮೃದ್ಧ ಕರ್ನಾಟಕ’ ಕಾರ್ಯಕ್ರಮಗಳನ್ನು ಸರ್ಕಾರ ರದ್ದುಪಡಿಸಿದೆ.
ಮಧ್ಯರಾತ್ರಿ 12.30ಕ್ಕೆ ಬೆಂಗಳೂರಿನ ಆರ್.ಟಿ. ನಗರ ನಿವಾಸದಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿ ಈ ವಿಷಯ ಪ್ರಕಟಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಸರ್ಕಾರಕ್ಕೆ ಮೂರು ವರ್ಷ ತುಂಬಿದ ಯಾವುದೇ ಆಚರಣೆಯನ್ನೂ ಮಾಡಲು ಮನಸ್ಸಾಕ್ಷಿ ಒಪ್ಪುತ್ತಿಲ್ಲ.
ಹೀಗಾಗಿ ಎಲ್ಲ ಕಾರ್ಯಕ್ರಮಗಳನ್ನು ರದ್ದುಪಡಿಸಿದ್ದು, ಬಡವರು, ಪರಿಶಿಷ್ಟ ಜಾತಿ, ವರ್ಗದವರು, ಮಹಿಳೆಯರು, ಯುವಕರ ಅಭಿವೃದ್ಧಿಗೆ ಕೆಲ ಕಾರ್ಯಕ್ರಮಗಳನ್ನಷ್ಟೇ ಪ್ರಕಟಿಸಲಾಗುವುದು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದರು.