ಬೆಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕೋರಿ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಎನ್.ಎಚ್.ಎಂ. ಯೋಜನೆಯಡಿ ಕೆಲಸ ಮಾಡುತ್ತಿರುವ ನರ್ಸ್‌ಗಳ ಪ್ರತಿನಿಧಿಗಳು ಆರೋಗ್ಯ ಸೌಧದಲ್ಲಿ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.
ನರ್ಸ್ಗಳ ಸಂಘಟನೆಯ ಪ್ರತಿನಿಧಿಗಳ ದೂರುಗಳನ್ನು ಆಲಿಸಿದ ನಂತರ, ವೇತನ ಹೆಚ್ಚಳವನ್ನು ಪರಿಶೀಲಿಸುವುದಾಗಿ ಸಚಿವರು ಭರವಸೆ ನೀಡಿದರು.
ಎನ್.ಎಚ್.ಎಂ. ಯೋಜನೆಯನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಹಭಾಗಿತ್ವದಲ್ಲಿ ನಡೆಸಲಾಗುತ್ತಿದ್ದು, ವೇತನ ಹೆಚ್ಚಳಕ್ಕಾಗಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕಾಗುತ್ತದೆ ಮತ್ತು ಅನುಮೋದನೆ ಪಡೆಯಲಾಗುತ್ತದೆ. ಈ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಲಾಗುವುದು. ನರ್ಸ್‌ಗಳ ನೇಮಕಾತಿಯ ಸಮಯದಲ್ಲಿ ಎನ್.ಎಚ್.ಎಂ. ಅಡಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಗ್ರೇಸ್ ಪೀರಿಯಡ್ ನೀಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು. ಇದರೊಂದಿಗೆ, ಒಮ್ಮೆ ಅಂತರ ಜಿಲ್ಲಾ ವರ್ಗಾವಣೆಗೆ ಅವಕಾಶ ನೀಡಲಾಗುವುದು.
ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳುವ ಬಗ್ಗೆ ಪ್ರತಿಭಟನಾ ನಿರತ ನರ್ಸ್‌ಗಳೊಂದಿಗೆ ಚರ್ಚಿಸಿ ನಾಳೆಯೊಳಗೆ ನಿರ್ಧಾರವನ್ನು ಘೋಷಿಸುವುದಾಗಿ ಸಂಸ್ಥೆಯ ಪ್ರತಿನಿಧಿಗಳು ಹೇಳಿದರು.