ಬೆಂಗಳೂರು: ಕುರುಬ ಸಮುದಾಯವನ್ನು ಎಸ್ ಟಿ ಮೀಸಲಾತಿಗೆ ಸೇರಿಸುವಂತೆ ಆಗ್ರಹಿಸಿ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಕಾಗಿನೆಲೆ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಬೃಹತ್ ಜಾಗೃತಿ ಸಮಾವೇಶ ನಡೆಯಿತು. ದೇಶದೆಲ್ಲೆಡೆಯಿಂದ ಸಮಾವೇಶಕ್ಕೆ ಲಕ್ಷಾಂತರ ಜನಸಾಗರವೇ ಹರಿದುಬಂದಿತ್ತು.
ಈ ಸಂದರ್ಭದಲ್ಲಿ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಅವರು ಮಾತನಾಡಿ, ನಮ್ಮ ಪಾದಯಾತ್ರೆಗೆ ಅಭೂತಪೂರ್ವ ಬೆಂಬಲ ಸಿಕ್ಕಿತ್ತು. ಸಮಾವೇಶಕ್ಕೂ ಕೂಡ ಭಾರೀ ಸಂಖ್ಯೆಯಲ್ಲಿ ಜನ ಆಗಮಿಸಿದ್ದು, ನಮ್ಮ ಹೋರಾಟಕ್ಕೆ ಸಮುದಾಯದಿಂದ ಉತ್ತಮ ಸ್ಪಂದನೆ ಸಿಕ್ಕಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಇನ್ನು ನಮ್ಮ ಪಾದಯಾತ್ರೆ ಯಾವುದೇ ವ್ಯಕ್ತಿ, ಪಕ್ಷದ ಪರವಲ್ಲ. ಸಮುದಾಯದ ಶೈಕ್ಷಣಿಕ, ಸಾಮಾಜಿಕ ಅಭಿವೃದ್ಧಿಯೇ ನಮ್ಮ ಗುರಿ. ರಾಜ್ಯದ ರಾಜ ಯಡಿಯೂರಪ್ಪ ಅವರೇ ನೀವು ಕುರುಬ ಸಮಾಜದ ಮೇಲೆ ಪ್ರೀತಿ ಕೊಡುವ ಸ್ಥಾನದಲ್ಲಿದ್ದು, ನಾವು ಬೇಡುವ ಸ್ಥಾನದಲ್ಲಿದ್ದೇವೆ. ನಮ್ಮ ಬೇಡಿಕೆಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿ. ನಮ್ಮ ಸಮುದಾಯಕ್ಕೆ ಈವರೆಗೆ ಉಪ್ಪಿನಕಾಯಿ ಕೊಡಲಾಗುತ್ತಿತ್ತು. ಆದರೆ ಮೀಸಲಾತಿಗೆ ಸಹಕರಿಸಿ ಊಟ ಕೊಡಿ ಎಂದು ಸರ್ಕಾರವನ್ನು ಒತ್ತಾಯಿಸಿದರು.