ಬೆಂಗಳೂರು: ಕುರುಬ ಸಮುದಾಯವನ್ನು ಎಸ್ ಟಿ ಮೀಸಲಾತಿಗೆ ಸೇರಿಸುವಂತೆ ಆಗ್ರಹಿಸಿ ಕಾಗಿನೆಲೆ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ನಗರದ ಮಾದಾವರದ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಮೈದಾನದಲ್ಲಿ ಬೃಹತ್ ಜಾಗೃತಿ ಸಮಾವೇಶ ನಡೆಯಿತು.
ಶ್ರೀ ನಿರಂಜನಾಂದಪುರಿ ಮಹಾಸ್ವಾಮೀಜಿ ಅವರ ನೇತೃತ್ವದಲ್ಲಿ ನಡೆದ ಕುರುಬರ ಎಸ್.ಟಿ ಹೋರಾಟಕ್ಕೆ ದಿಂಡು ದಿಂಡಾಗಿ ಭಾರತದ ಎಲ್ಲ ಮೂಲೆಗಳಿಂದ ಲಕ್ಷಾಂತರ ಜನ ಸಾಗರವೇ ಹರಿದುಬಂದಿತ್ತು. ಈ ಸಂದರ್ಭದಲ್ಲಿ ಗುರುಗಳೊಂದಿಗೆ ಕುರುಬ ಸಮುದಾಯದ ಮಠಾಧಿಪತಿಗಳು, ಸಚಿವ ಕೆ .ಎಸ್ ಈಶ್ವರಪ್ಪ, ಎಂ.ಟಿ.ಬಿ ನಾಗರಾಜ್, ಆರ್.ಶಂಕರ್, ಮಾಜಿ ಸಚಿವ ಹೆಚ್.ಎಂ ರೇವಣ್ಣ, ಹೆಚ್ ವಿಶ್ವನಾಥ್ ಸೇರಿದಂತೆ ರಾಜ್ಯದ ಎಲ್ಲಾ ಕುರುಬ ಸಮುದಾಯದ ಮುಖಂಡರು ಸಮಾವೇಶದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಎಲ್ಲಾ ಕುರುಬ ಸಮುದಾಯದ ನಾಯಕರು ಶೀಘ್ರವೇ ಎಸ್ ಟಿ ಮೀಸಲಾತಿ ಆಗಬೇಕೆಂದು ಸರ್ಕಾರದ ಮೇಲೆ ಒತ್ತಡ ಹೇರಿದರು.
ಕುರುಬರ ಸ್ಪಂದನೆಗೆ ನಿರಂಜನಾನಂದಪುರಿ ಹರ್ಷ
ಕುರುಬ ಸಮುದಾಯಕ್ಕೆ ಎಸ್ಟಿ ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ಸಮಾವೇಶದ ನೇತೃತ್ವವನ್ನು ಕಾಗಿನೆಲೆಯ ನಿರಂಜನಾನಂದಪುರಿ ಶ್ರೀ ವಹಿಸಿಕೊಂಡಿದ್ದು, ಸಮಾವೇಶ & ಹೋರಾಟಕ್ಕೆ ಸಿಗುತ್ತಿರುವ ಬೆಂಬಲದ ಬಗ್ಗೆ ಮಾತನಾಡಿದ್ದಾರೆ. ಹೌದು, ನಮ್ಮ ಪಾದಯಾತ್ರೆಗೆ ಅಭೂತಪೂರ್ವ ಬೆಂಬಲ ಸಿಕ್ಕಿತ್ತು. ಸಮಾವೇಶಕ್ಕೂ ಕೂಡ ಭಾರೀ ಸಂಖ್ಯೆಯಲ್ಲಿ ಜನ ಆಗಮಿಸಿದ್ದಾರೆ. ನಮ್ಮ ಹೋರಾಟಕ್ಕೆ ಸಮುದಾಯದಿಂದ ಉತ್ತಮ ಸ್ಪಂದನೆ ಸಿಕ್ಕಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ನಾವು ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದಿದ್ದೇವೆ: ಗೊರವಯ್ಯ
ಈ ವೇಳೆ ಗೊರವಯ್ಯನವರು ಅವರು ಮಾತನಾಡಿ, ಹೌದು ನಮ್ಮ ಸಮುದಾಯವು ಶೈಕ್ಷಣಿಕವಾಗಿ, ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಬಹಳ ಹಿಂದುಳಿದಿದ್ದೇವೆ. ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕಿದೆ. ಹೀಗಾಗಿ ನಮ್ಮ ಸಮುದಾಯಕ್ಕೆ ಪರಿಶಿಷ್ಟ ಪಂಗಡ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ನಮಗೆ ಕುಲಶಾಸ್ತ್ರ ಅಧ್ಯಯನವೇ ಬೇಡ: ವಿಶ್ವನಾಥ್
ಹೆಚ್.ವಿಶ್ವನಾಥ್ ಅವರು ಮಾತನಾಡಿ, ಈ ಸಮಾವೇಶ ಈ ಯುಗದ ಇತಿಹಾಸ. ಕಾಗಿನೆಲೆಯಿಂದ ಬೆಂಗಳೂರಿಗೆ 21 ದಿನ ಪಾದಯಾತ್ರೆ ಮಾಡಿದ್ದೇವೆ. ನಮ್ಮ ಕೂಗನ್ನು ಕೇಂದ್ರ & ರಾಜ್ಯ ಸರ್ಕಾರಗಳು ಆಲಿಸಬೇಕು. ಪಾದಯಾತ್ರೆಗೆ ಗೃಹ ಸಚಿವರು ಎಲ್ಲಾ ವ್ಯವಸ್ಥೆ ಮಾಡಿದ್ದರು. ನಮಗೆ ಯಾವುದೇ ಕುಲಶಾಸ್ತ್ರದ ಅಧ್ಯಯನ ಬೇಕಾಗಿಲ್ಲ. ಈಗಾಗಲೇ ಅಧ್ಯಯನ ಮುಗಿದುಹೋಗಿದೆ. ಈಗ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಿದಲ್ಲಿ ಅದನ್ನು ಕೇಂದ್ರ ಸರ್ಕಾರ ಒಪ್ಪಿ ಮೀಸಲಾತಿ ಘೋಷಿಸಬೇಕು ಎಂದರು.
ನಾವು ಒಂದು ಕುರ್ಚಿಯ ನಾಲ್ಕು ಕಾಲುಗಳಿದ್ದಂತೆ: ಆರ್.ಶಂಕರ್
ಸಮಾವೇಶದಲ್ಲಿ ಸಚಿವ ಆರ್.ಶಂಕರ್ ಅವರು ಇಂದು ಮಾತನಾಡಿದ್ದು, ಎಸ್ಟಿ ಮೀಸಲಾತಿಗಾಗಿ ರಾಜ್ಯದ ಎಲ್ಲೆಡೆ ಆಗ್ರಹ ಕೇಳಿ ಬರುತ್ತಿದೆ. ಸಚಿವ ಆರ್.ಅಶೋಕ್ ಅವರು ನಮ್ಮ ಮನವಿ ಸ್ವೀಕರಿಸಲು ಸಮಾವೇಶಕ್ಕೆ ಆಗಮಿಸಿದ್ದಾರೆ. ಮುಖ್ಯಮಂತ್ರಿಗಳು ನಮ್ಮ ಮನವಿಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡುತ್ತಾರೆ ಎಂಬ ವಿಶ್ವಾಸವಿದೆ. ಸರ್ಕಾರದಲ್ಲಿ ನಮ್ಮ ಸಮುದಾಯದ ನಾಲ್ವರು ಸಚಿವರಿದ್ದು, ಒಬ್ಬೊಬ್ಬರೂ ಕೂಡ ಒಂದು ಕುರ್ಚಿಯ ನಾಲ್ಕು ಕಾಲುಗಳಂತೆ ಇದ್ದೇವೆ ಎಂದು ಹೇಳಿದರು.
ಇದನ್ನು ಓದಿ: ಕುರುಬರ ಎಸ್ಟಿ ಮೀಸಲಾತಿ ರಣಕಹಳೆ: ರಾಜ್ಯದೆಲ್ಲೆಡೆಯಿಂದ ಹರಿದುಬಂದ ಜನಸಾಗರ; ಹಲವೆಡೆ ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ
ಇದನ್ನು ಓದಿ: ಎಂಟನೇ ದಿನದ ಕುರುಬರ S T ಹೋರಾಟದ ಪಾದಯಾತ್ರೆ ಯಶಸ್ವಿ; ಗಮನ ಸೆಳೆಯಿತು ಅಂಗವಿಕಲನೊಬ್ಬ ಹೆಜ್ಜೆ ಹಾಕುವ ದೃಶ್ಯ
ಇದನ್ನು ಓದಿ: ಕುರುಬರ ಎಸ್.ಟಿ ಮೀಸಲಾತಿ: ನಮಗೆ ಮೀಸಲಾತಿ ಸಿಗುತ್ತದೆಯೋ, ಇಲ್ಲವೋ ಗೊತ್ತಿಲ್ಲ; ಫಲ ಸಿಗುವವರೆಗೂ ಹೋರಾಟ: ಶ್ರೀ ನಿರಂಜನಾನಂದಪುರಿ
ಇದನ್ನು ಓದಿ: ಕುರುಬರ ಎಸ್ ಟಿ ಮೀಸಲಾತಿ ರಣಕಹಳೆ; ಸಮುದಾಯದ ಮೇಲಿನ ದಬ್ಬಾಳಿಕೆ, ದೌರ್ಜನ್ಯ ತಪ್ಪಿಸಲು ಹೋರಾಟ: ಶ್ರೀ ನಿರಂಜನಾನಂದ ಪುರಿ